SUDDIKSHANA KANNADA NEWS/ DAVANAGERE/ DATE:30-01-2025
ದಾವಣಗೆರೆ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮಾ ಗಾಂಧೀಜಿಯವರ ಕೊಲೆಯ ನಿಗೂಢತೆ ಇನ್ನು ತಿಳಿದು ಬಂದಿಲ್ಲ. ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿ ಕನಸಿನ ರಾಮರಾಜ್ಯ ದೇಶದಲ್ಲಿ ಕಟ್ಟಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಬಿ. ಆರ್. ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮ ಸೈನಿಕರು, ಹುತಾತ್ಮ ರೈತರ ನೆನಪಿನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ವಿಕೇಂದ್ರಿಕರಣವಾಗಬೇಕು. ಗಾಂಧೀಜಿಯವರ
ಕನಸು ಸಾಮೂಹಿಕ ಕೃಷಿಯತ್ತ ರೈತರು ಸಾಗಬೇಕು, ರೈತರು ಉದ್ದಾರಾಗಬೇಕು ಎಂಬುದಾಗಿತ್ತು. ಆದರೆ ಇಂದು ಕಾರ್ಪೂರೇಟ್ ಕೃಷಿಯತ್ತ ಸರ್ಕಾರ ಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಇಂದು ದೇಶಕ್ಕೆ ಸ್ವತಂತ್ರ ಬರಲು ಹೋರಾಟ ಮಾಡಿದ ಮಹಾತ್ಮಾ ಗಾಂಧಿ ಹುತಾತ್ಮರಾದ ದಿನ. ಅವರನ್ನು
ನೆನೆಯುವ ಮೂಲಕ ಇಂದು ಗಡಿ ಕಾಯುವ ಸೈನಿಕರು, ಸ್ವಾತಂತ್ರ ಹೋರಾಟಗಾರರು ದೇಶಕ್ಕೆ ಅನ್ನನೀಡುವ ರೈತನ ಹುತಾತ್ಮ ದಿನ ಆಚರಣೆ ಮಾಡುತ್ತಿರುವುದು ಅರ್ಥಗರ್ಭಿತವಾಗಿದೆ ಎಂದು ತಿಳಿಸಿದರು.
ಸರ್ಕಾರಗಳು ಬಡವರ ಉದ್ದಾರದ ಯೋಜನೆಗಳನ್ನು ಜಾರಿ ತರುವ ಮಾತನಾಡುತ್ತಲೇ ಮೈಕ್ರೋ ಫೈನಾನ್ಸ್ ಮೂಲಕ ಸಾಲ ನೀಡಿ ಮಹಿಳೆಯರು, ಬಡವರನ್ನು ನಾಶ ಮಾಡುತ್ತಿವೆ. ಊರು ಖಾಲಿ ಮಾಡಿಸುವ ಕೆಲಸ ನಡೆಸುತ್ತಿವೆ. ಆನ್ ಲೈನ್ ಗೇಮ್
ಜೂಜು ಜಾರಿ ಮಾಡಿ ಯುವ ಪೀಳಿಗೆ ಭವಿಷ್ಯ ನಾಶ ಮಾಡುತ್ತಿದೆ. ರೈತರ ಮರಣ ಶಾಸನ ಬರೆಯುವ ಕಾನೂನುಗಳು ಜಾರಿಯಾಗುತ್ತಿವೆ. ರೈತರ ಸಾಲ ತಪ್ಪಿಸಲು ಸಿಬಿಲ್ ಸ್ಕೋರ್, ಸಾಲ ವಸುಲಾತಿ ಮೂಲಕ ಬ್ಯಾಂಕುಗಳು ರೈತರ ಜಮೀನು
ಮುಟ್ಟು ಗೋಲು ಹಾಕಿಕೊಳ್ಳಲು ಸರ್ಫೈಸಿ ಕಾಯ್ದೆ ಜಾರಿಗೆ ತರುತ್ತಿದೆ. ರೈತರ ಉತ್ಪನ್ನಗಳಿಗೆ ಜಿಎಸ್ಟಿ ತೆರಿಗೆ ಬರೆ ಹಾಕಿದ್ದಾರೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮೂಲಕ ರೈತರ ಜಮೀನು ಶ್ರೀಮಂತರು ಕಬಳಿಸಲು ದಾರಿ ಮಾಡುತ್ತಿದ್ದು, ಇದು ದುರಂತವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೈನುಗಾರಿಕೆ ಮಾಡುವ 36 ಲಕ್ಷ ಮಹಿಳೆಯರಿಗೆ ಐದು ರೂಪಾಯಿ ಹಾಲಿನ ಪ್ರೋತ್ಸಾಹ ಧನ 10 ತಿಂಗಳಿಂದ ಬಿಡುಗಡೆಯಾಗಿಲ್ಲ. ಬಡವರ ಬಗ್ಗೆ ಉದ್ದುದ್ದ ಮಾತನಾಡುತ್ತಾರೆ ಇದು ವಿಪರ್ಯಾಸ. ಪಂಜಾಬ್ ಸರ್ಕಾರ ಟನ್ ಕಬ್ಬಿಗೆ 4200 ದರ ನಿಗದಿ ಮಾಡಿದೆ. ರಾಜ್ಯದಲ್ಲಿ 10 ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ದೂರಿದರು.
ದೇಶದ ರೈತರಿಗಾಗಿ ದೆಹಲಿ ಗಡಿಯಲ್ಲಿ ದಲೆವಾಲಾ ರವರು 65 ದಿನದಿಂದ ಕೃಷಿ ಉತ್ಪನ್ನಗಳಿಗೆ ಎಂ ಎಸ್ ಪಿ ಕಾತ್ರಿ ಕಾನೂನು ಜಾರಿಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. 31 ಜನರ ಸಂಸದೀಯ ಮಂಡಳಿ ನವಂಬರ್ 18ರಂದು ಕೇಂದ್ರ ಸರ್ಕಾರಕ್ಕೆ ವರದಿ ನೀಡಿ ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ತರಬೇಕೆಂದು ಸೂಚಿಸಿದೆ. ಸರ್ವೋಚ್ಚ ನ್ಯಾಯಾಲಯ ರಚಿಸಿದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನವಾಬ್ಸಿಂಗ್ ರವರು ನವಂಬರ್ 22ರಂದು ವರದಿ ನೀಡಿ ಎಂ ಎಸ್ ಪಿ ಖಾತ್ರಿ ಕಾನೂನು ಅವಶ್ಯ ಎಂದು ವರದಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ 2011ರಲ್ಲಿ ಎಂ ಎಸ್ ಪಿ ಖಾತ್ರಿ ಕಾನೂನು ಜಾರಿಯಾಗಬೇಕು ಎಂದು ವರದಿ ನೀಡಿದ್ದಾರೆ. ಆದರೆ ಅಧಿಕಾರಕ್ಕೆ ಬಂದು 14 ವರ್ಷಗಳಾದರೂ ಈ ಕಾಯ್ದೆ ಜಾರಿ ಮಾಡಿಲ್ಲ ಎಂದು ಹೇಳಿದರು.
ಎಲ್ಲರೂ ಸುಳ್ಳುಗಳನ್ನು ಹೇಳುವ ಮೂಲಕ ರೈತರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗದ ಶಿಫಾರಸ್ಸು ಮುಂದಿನ ವರ್ಷ ಜನವರಿಯಿಂದ ಜಾರಿ ಆಗಬೇಕು ಒಂದು ವರ್ಷ ಮೊದಲೇ ಎಂಟನೇ ವೇತನ ಆಯೋಗದ ಹೆಚ್ಚುವರಿ ಸಂಬಳ ನೀಡುವ ಘೋಷಣೆ ಮಾಡಿದ್ದಾರೆ. ಸರ್ಕಾರಿ ನೌಕರರ ಬಗ್ಗೆ ಎಷ್ಟು ಕಾಳಜಿ ಎಂಬುದು ರೈತರು ಅರಿತುಕೊಳ್ಳಬೇಕು. ಜಾಗೃತರಾಗಿ ದೆಹಲಿ ಹೋರಾಟದ ಮೂಲಕ ನ್ಯಾಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.
ಮಹಾಂತ ರುದ್ರಮುನಿ ಸ್ನಾಮೀಜಿ, ರೈತ ಮುಖಂಡ ತೇಜಸ್ವಿ ವಿ ಪಟೇಲ್. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಾಮದೇವಪ್ಪ ಮಾತನಾಡಿದರು. ಕಾರ್ಯಕ್ರಮ ಆಯೋಜಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.