SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ಕೇಂದ್ರದಲ್ಲಿ ಸಚಿವರಾಗಿರುವ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ವಿಧಾನಸಭೆ ಚುನಾವಣೆಗೆ ಇನ್ನೂ ಮೂರುವರೆ ವರ್ಷ ಬಾಕಿ ಇದೆ. ಆಗಲೇ ಕೇಂದ್ರದ ಬಿಜೆಪಿ ನಾಯಕರಿಗೆ ಹೊಸ ಬೇಡಿಕೆ ಇಡುವುದಾಗಿ ಘೋಷಿಸಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಬಗ್ಗೆ ಕೇಂದ್ರ ಬಿಜೆಪಿ ನಾಯಕರಿಗೆ ಗೌರವವಿದೆ, ಅಭಿಮಾನ ಇದೆ. ಹಾಗಾಗಿ, ಕಾರ್ಯಕರ್ತರು ಬಲಿಷ್ಠವಾಗಿ ಪಕ್ಷ ಸಂಘಟಿಸಬೇಕು. ಆಗ ಮಾತ್ರ ನಾನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 90 ರಿಂದ 95 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲು ಸಾಧ್ಯವಾಗೋದು. ಈ ವಿಚಾರ ಜೆಡಿಎಸ್ ನಾಯಕರಿಗೂ ಹೇಳಿದ್ದೇನೆ ಎಂದು ತಿಳಿಸಿದರು.
ಇಲ್ಲಿ ಪಕ್ಷ ಬಲಿಷ್ಠವಾಗಿದ್ದರೆ ನಾನು ಕೇಂದ್ರ ಮಟ್ಟದಲ್ಲಿ ನಿಮ್ಮ ಪರ ಧ್ವನಿಯಾಗಿ ಕೆಲಸ ಮಾಡಬಹುದು. ಹಾಗಾಗಿ, ಸದಸ್ಯತ್ವ ಅಭಿಯಾನ ಗಂಭೀರವಾಗಿ ತೆಗೆದುಕೊಂಡು ನೋಂದಣಿ ಮಾಡಿ. ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠಗೊಳಿಸಿ ಎಂದು ಕರೆ ನೀಡಿದರು.
ಕಾಂಗ್ರೆಸ್, ಬಿಜೆಪಿ ರೀತಿ ಕಮೀಷನ್ ವ್ಯವಹಾರ ಮಾಡಿದ್ದೇನಾ? ನಾನು ಸಿಎಂ ಆಗಿದ್ದಾಗ ರೈತರಿಗೆ ಹಲವಾರು ಉಪಯೋಗ ಮಾಡಿಕೊಟ್ಟಿದ್ದೇನೆ. ಜನತಾದಳ ಒಟ್ಟಾಗಿದ್ದಾಗ ಎಲ್ಲಾ ಶಕ್ತಿಗಳು ಇದ್ದವು. ಜೆ. ಹೆಚ್. ಪಟೇಲ್ ರಂಥ ನಾಯಕರಿದ್ದರು. ಯುವಕರು ನನ್ನ ಜೊತೆ ಓಡಾಡುವುದಲ್ಲ. ಜನರ ಜೊತೆ ಓಡಾಡಿ. ಜನರ ಸಮಸ್ಯೆಗಳಿಗೆ ಪರಿಹಾರ ತಂದುಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಜನತೆ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ. ಕರ್ನಾಟಕ ರಾಜ್ಯ ಸಂಪದ್ಭರಿತವಾದದ್ದು. ಒಳ್ಳೆಯದು ಮಾಡಲು ಜನತಾದಳ ಬೆಳೆಯಬೇಕು. ಅಧಿಕಾರಕ್ಕೆ ಬರಬೇಕು. ಪಕ್ಷ ಬೆಳೆದಿರುವುದು ವೈಯಕ್ತಿಕವಾಗಿ ಮಾತು ಕೇಳಿ ಬರುತ್ತಿದೆ. ನಾಯಕರಿಂದ ಬೆಳೆದಿಲ್ಲ. ಸಾಮಾನ್ಯ ಜನರು, ರೈತರು ಬೆಳೆಸಿರುವ ಪಕ್ಷ ನಮ್ಮದು ಎಂದು ತಿಳಿಸಿದರು.