ಸ್ಯಾನ್ ಜೋಸ್: ವಿಶ್ವದ ಅಗ್ರಗಣ್ಯ ಚಿಪ್ ತಯಾರಕ ಸಂಸ್ಥೆ ‘ಎನ್‌ವಿಡಿಯಾ’ (Nvidia) ಸಿಇಒ ಜೆನ್ಸನ್ ಹುವಾಂಗ್ (63) ಅವರ ವೈಯಕ್ತಿಕ ಜೀವನದ ವಿವಾದಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ. ಚೀನಾ ಗೂಢಚರ್ಯೆ ನಂಟಿನ ಬೆನ್ನಲ್ಲೇ, ಎನ್‌ವಿಡಿಯಾದ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆ ಹಾಗೂ ತಮ್ಮ ನೇರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಕಿಂಬರ್ಲಿ ಪೊವೆಲ್ ಅವರೊಂದಿಗೆ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಈ ಬೆಳವಣಿಗೆಯಿಂದಾಗಿ 4 ಟ್ರಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಉನ್ನತ ನಾಯಕತ್ವದಲ್ಲಿ ಭಾರಿ ಬಿರುಗಾಳಿ ಎದ್ದಿದೆ.
‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಕಳೆದ ಮಾರ್ಚ್‌ನಲ್ಲಿ ಸ್ಯಾನ್ ಜೋಸ್‌ನಲ್ಲಿ ನಡೆದ ವಾರ್ಷಿಕ ಡೆವಲಪರ್ ಸಮ್ಮೇಳನದ ವೇಳೆ ಹುವಾಂಗ್ ಮತ್ತು ಪೊವೆಲ್ ಅವರು ಹೋಟೆಲ್ ಒಂದರಲ್ಲಿ ಆತ್ಮೀಯವಾಗಿದ್ದುದು ಕಂಡುಬಂದಿದೆ. ಈ ದೃಶ್ಯವನ್ನು ಬೈಸ್ಟ್ಯಾಂಡರ್ (ಪ್ರತ್ಯಕ್ಷದರ್ಶಿ) ಒಬ್ಬರು ವೀಡಿಯೊ ಮಾಡಿದ್ದು, ಹುವಾಂಗ್ ಅವರ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ತಡೆದು ಎನ್‌ಡಿಎ (ಗೌಪ್ಯತಾ ಒಪ್ಪಂದ) ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಿಂಬರ್ಲಿ ಪೊವೆಲ್ ಹಿನ್ನೆಲೆ: 2008ರಲ್ಲಿ ನಿರ್ದೇಶಕರಾಗಿ ಎನ್‌ವಿಡಿಯಾ ಸೇರಿದ್ದ ಕಿಂಬರ್ಲಿ ಪೊವೆಲ್, ಕಳೆದ 18 ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಇಮೇಜಿಂಗ್‌ನಲ್ಲಿ AI ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವ ಮೂಲಕ ಆರಂಭವಾದ ಇವರ ವೃತ್ತಿಜೀವನವು, 2017ರ ವೇಳೆಗೆ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷೆ ಹುದ್ದೆಗೇರುವಂತೆ ಮಾಡಿದೆ.
ವಿವಾಹಿತೆ ಮತ್ತು ಇಬ್ಬರು ಮಕ್ಕಳ ತಾಯಿ: ವರದಿಗಳ ಪ್ರಕಾರ ಪೊವೆಲ್ ಅವರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಆದರೆ ಅವರ ಪತಿಯ ವಿವರಗಳು ಬಹಿರಂಗವಾಗಿಲ್ಲ.
ಎನ್‌ವಿಡಿಯಾ ನೀತಿ ಸಂಹಿತೆ ಮತ್ತು ಸಂಭಾವ್ಯ ಪದಚ್ಯುತಿ: ಕಂಪನಿಯ ನೀತಿ ಸಂಹಿತೆಯ ಪ್ರಕಾರ ವೈಯಕ್ತಿಕ ಸಂಬಂಧಗಳು ಹಿತಾಸಕ್ತಿ ಸಂಘರ್ಷಕ್ಕೆ (Conflict of Interest) ಕಾರಣವಾಗಬಹುದು. ಹುವಾಂಗ್ ಅವರ ಈ ವಿವಾದಗಳ ಹಿನ್ನೆಲೆಯಲ್ಲಿ ಎನ್‌ವಿಡಿಯಾ ಮಂಡಳಿಯು ಅವರನ್ನು ಸಿಇಒ ಸ್ಥಾನದಿಂದ ವಜಾಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಕಂಪನಿ ಭಾರಿ ನಷ್ಟ ಅನುಭವಿಸುತ್ತಿದೆ.
ಹುವಾಂಗ್ ಜತೆಗಿನ ದೀರ್ಘಾವಧಿಯ ವೃತ್ತಿಪರ ಒಡನಾಟದಿಂದಾಗಿ ಪೊವೆಲ್ ಅವರು ಹೆಲ್ತ್‌ಕೇರ್ ವಿಭಾಗವನ್ನು ಮುಂಚೂಣಿಗೆ ತಂದಿದ್ದರು. ಆದರೆ ಪ್ರಸ್ತುತ ಈ ಹಗರಣವು ಟೆಕ್ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.





Leave a comment