ನವದೆಹಲಿ: ದೇಶದ ಅನ್ನದಾತರ ಹಿತರಕ್ಷಣೆಗಾಗಿ ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರಬಿ 2026-27 ನೇ ಹಂಗಾಮಿಗೆ ರಂಜಕ ಮತ್ತು ಪೊಟ್ಯಾಷಿಯಮ್ ರಸಗೊಬ್ಬರಗಳ ಮೇಲಿನ ಪೋಷಕಾಂಶ ಆಧಾರಿತ ಸಬ್ಸಿಡಿ (Nutrient-Based Subsidy) ದರಕ್ಕೆ ಕೇಂದ್ರ ಸಂಪುಟವು ಅಧಿಕೃತ ಅನುಮೋದನೆ ನೀಡಿದೆ.
ಸವಾಲಿನ ಜಾಗತಿಕ ಪರಿಸ್ಥಿತಿಗಳ ನಡುವೆಯೂ ರೈತರ ಜೀವನಮಟ್ಟ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ದೇಶದ ರೈತರು ಯಾವಾಗಲೂ ಸರ್ಕಾರದ ಮೊದಲ ಆದ್ಯತೆಯಾಗಿದ್ದಾರೆ” ಎಂದು ಹೇಳಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರ ಬೆಲೆಯಲ್ಲಿ ವ್ಯತ್ಯಾಸ ಉಂಟಾದರೂ, ನಮ್ಮ ರೈತರಿಗೆ ಕೈಗೆಟುಕುವ ಹಾಗೂ ಸಮಂಜಸವಾದ ಬೆಲೆಯಲ್ಲಿ ರಸಗೊಬ್ಬರಗಳು ಸಿಗುವುದನ್ನು ಈ ಸಬ್ಸಿಡಿಯು ಖಚಿತಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಬೃಹತ್ ಆರ್ಥಿಕ ನೆರವು: ರಬಿ 2026-27 ನೇ ಸಾಲಿಗೆ ಅಂದಾಜು ಒಟ್ಟು ಬಜೆಟ್ ಅಗತ್ಯತೆಯು ಸುಮಾರು 62,370.02 ಕೋಟಿ ರೂ.ಗಳಷ್ಟಿರಲಿದೆ. ಇದು ಕಳೆದ ವರ್ಷದ (ರಬಿ 2025-26) ಬಜೆಟ್ ಅಗತ್ಯತೆಗಿಂತ ಸುಮಾರು 24,417.73 ಕೋಟಿ ರೂ. ಹೆಚ್ಚು ಅಧಿಕವಾಗಿದೆ.
ಅಂತರರಾಷ್ಟ್ರೀಯ ಬೆಲೆ ಏರಿಕೆಯಿಂದ ರಕ್ಷಣೆ: ಜಾಗತಿಕ ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ಏರಿಕೆಯ ಬಿಸಿ ದೇಶದ ರೈತರಿಗೆ ತಟ್ಟದಂತೆ ತಡೆಯಲು ಮತ್ತು ರಸಗೊಬ್ಬರಗಳ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ರೈತರೇ ಅಗ್ರಪ್ರಾಮುಖ್ಯತೆ: ಸವಾಲಿನ ಆರ್ಥಿಕ ಹಾಗೂ ಜಾಗತಿಕ ಸನ್ನಿವೇಶಗಳಲ್ಲೂ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ಕೊರತೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಅಭಯ ನೀಡಿದ್ದಾರೆ.
ಕೃಷಿ ಚಟುವಟಿಕೆಗಳು ಜೋರಾಗಿರುವ ರಬಿ ಹಂಗಾಮಿನ ಸಮಯದಲ್ಲಿ ಕೇಂದ್ರ ಸರ್ಕಾರದ ಈ ಸಬ್ಸಿಡಿ ನಿರ್ಧಾರವು ದೇಶಾದ್ಯಂತ ಇರುವ ಕೋಟ್ಯಂತರ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನೆರವು ನೀಡಲಿದೆ.





Leave a comment