Home ಕ್ರೈಂ ನ್ಯೂಸ್ ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ ಜಾಗದಲ್ಲಿ ‘ಶುದ್ಧೀಕರಣ’ಕ್ಕೆ ದೇಶಾದ್ಯಂತ ಆಕ್ರೋಶ: ರಾಜ್ಯಸಭೆಯಲ್ಲಿ ತೀವ್ರ ಗಲಾಟೆ, ತನಿಖೆಗೆ ನಡ್ಡಾ ಭರವಸೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮಲ್ಲಿಕಾರ್ಜುನ ಖರ್ಗೆ ಸಭೆ ನಡೆಸಿದ ಜಾಗದಲ್ಲಿ ‘ಶುದ್ಧೀಕರಣ’ಕ್ಕೆ ದೇಶಾದ್ಯಂತ ಆಕ್ರೋಶ: ರಾಜ್ಯಸಭೆಯಲ್ಲಿ ತೀವ್ರ ಗಲಾಟೆ, ತನಿಖೆಗೆ ನಡ್ಡಾ ಭರವಸೆ!

Share
ಮಲ್ಲಿಕಾರ್ಜುನ ಖರ್ಗೆ
Share

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಕೆಲವೇ ದಿನಗಳಲ್ಲಿ, ಅದೇ ವೇದಿಕೆಯಲ್ಲಿ ಬಲಪಂಥೀಯ ಸಂಘಟನೆಯೊಂದು ‘ಶುದ್ಧೀಕರಣ’ ಹಾಗೂ ಹವನ ನಡೆಸಿರುವುದು ದೇಶಾದ್ಯಂತ ಭಾರಿ ರಾಜಕೀಯ ಸಂಚಲನ ಮೂಡಿಸಿದೆ.

ಮಳೆಗಾಲದ ಸಂಸತ್ ಅಧಿವೇಶನದ ಕೊನೆಯ ದಿನವಾದ ಗುರುವಾರ ಈ ವಿಷಯ ರಾಜ್ಯಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.

ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, “ಆಗಸ್ಟ್ 8 ರಂದು ನಾನು ಲಕ್ಷಾಂತರ ಜನರ ಸಮ್ಮುಖದಲ್ಲಿ ಸಭೆ ನಡೆಸಿದ್ದೆ. ಯಾವುದೇ ಧರ್ಮ ಅಥವಾ ಸಮುದಾಯದ ವಿರುದ್ಧ ಮಾತನಾಡದೆ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೆ. ಆದರೆ, ನನ್ನ ಭಾಷಣ ಮುಗಿದ ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಸಂಘಟನೆಯವರು ವೇದಿಕೆಯ ಶುದ್ಧೀಕರಣ ಹಾಗೂ ಹವನ ಮಾಡಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆ ಹೀಗೆಯೇ ಆಗುವುದೇ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸಂಸದರ ಗದ್ದಲ ಮತ್ತು ಘೋಷಣೆಗಳ ನಡುವೆ ಸಭಾಪತಿಗಳು ಖರ್ಗೆ ಅವರನ್ನು ಸಮಾಧಾನಪಡಿಸಲು ಯತ್ನಿಸಿ, “ಅಸ್ಪೃಶ್ಯತೆಗಿಂತ ದೊಡ್ಡ ಪಾಪ ಜಗತ್ತಿನಲ್ಲಿ ಬೇರೊಂದಿಲ್ಲ, ಈ ಘಟನೆಯನ್ನು ಖಂಡಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದರು.

ಇದೇ ವೇಳೆ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡಿ, “ಬಿಜೆಪಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಹಾಗೂ ಇಂತಹ ಚಟುವಟಿಕೆಗಳನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು ಹಾಗೂ ಖರ್ಗೆ ಅವರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುವುದಾಗಿ ನಡ್ಡಾ ಭರವಸೆ ನೀಡಿದರು.

Share

Leave a comment

Leave a Reply

Your email address will not be published. Required fields are marked *