ಚೆನ್ನೈ: ಪ್ರಮುಖ ಕಾರ್ಪೊರೇಟ್ ವಲಯವಾದ ಟಿವಿಎಸ್ ಕುಟುಂಬದಲ್ಲಿ ಆಸ್ತಿ ವಿವಾದ ಭುಗಿಲೆದ್ದಿದೆ. ಟಿವಿಎಸ್ ಗ್ರೂಪ್‌ನ ಪ್ರಮುಖರಾದ ಡಾ. ಲಕ್ಷ್ಮಿ ವೇಣು ಅವರು ತಮ್ಮ ತಂದೆ ವೇಣು ಶ್ರೀನಿವಾಸನ್ ಅವರಿಗೆ ವಿಭಾಗ ನೋಟಿಸ್ ಜಾರಿ ಮಾಡಿದ್ದು, ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಕುಟುಂಬದ ಆಸ್ತಿಯಲ್ಲಿ ತಮಗೆ ಸಮಾನ ಪಾಲು ನೀಡುವಂತೆ ಆಗ್ರಹಿಸಿದ್ದಾರೆ. ವಿಶೇಷವೆಂದರೆ, ಈ ಹೋರಾಟಕ್ಕೆ ತಾಯಿ ಮಲ್ಲಿಕಾ ಶ್ರೀನಿವಾಸನ್ ಕೂಡ ಸಾಥ್ ನೀಡಿದ್ದಾರೆ.
ತಂದೆ ವೇಣು ಶ್ರೀನಿವಾಸನ್ ಅವರಿಗೆ ಬರೆದಿರುವ ನೋಟಿಸ್‌ನಲ್ಲಿ, ಕುಟುಂಬದ ಹಿರಿಯರಾಗಿ ತಮ್ಮ ಮೇಲಿನ ನಂಬಿಕೆ ಹಾಗೂ ಜವಾಬ್ದಾರಿಯನ್ನು ಪೂರೈಸಿ, ನ್ಯಾಯಸಮ್ಮತವಾದ ಆಸ್ತಿ ವಿಭಾಗವನ್ನು ಖಚಿತಪಡಿಸುವಂತೆ ಲಕ್ಷ್ಮಿ ವೇಣು ಒತ್ತಾಯಿಸಿದ್ದಾರೆ. ಟಿವಿಎಸ್ ಹೋಲ್ಡಿಂಗ್ಸ್, ಟಿವಿಎಸ್ ಮೋಟಾರ್ ಕಂಪನಿ, ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಮತ್ತು ಸುಂದರಮ್-ಕ್ಲೇಟನ್ ಕಂಪನಿಗಳ ಷೇರುಗಳು ಹಾಗೂ VS ಟ್ರಸ್ಟ್ ಒಳಗೆ ಬರುವ ಆಸ್ತಿಗಳ ವಿಚಾರವಾಗಿ ಈ ವಿವಾದ ಎದ್ದಿದೆ.
ಕಾನೂನು ಹೋರಾಟ: 2005ರ ತಿದ್ದುಪಡಿಯೊಂದಿಗೆ ಜಾರಿಗೆ ಬಂದ ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಸೆಕ್ಷನ್ 6ರ ಪ್ರಕಾರ ಹೆಣ್ಣುಮಕ್ಕಳಿಗೂ ಸಮಾನ ಹಕ್ಕಿದೆ ಎಂದು ಲಕ್ಷ್ಮಿ ವೇಣು ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ.
ಸಹೋದರನಿಗೆ ಒಲವು ಆರೋಪ: ತಮ್ಮ ಹಕ್ಕುಗಳನ್ನು ಕಡೆಗಣಿಸಿ, ಕುಟುಂಬದ ಪ್ರಯೋಜನಗಳು ಹಾಗೂ ಮಾಲೀಕತ್ವವನ್ನು ಸಹೋದರ ಸುದರ್ಶನ್ ಪರವಾಗಿ ಕೇಂದ್ರೀಕರಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ತಾಯಿ ಮಲ್ಲಿಕಾ ಶ್ರೀನಿವಾಸನ್ ಬೆಂಬಲ: ಮಗಳು ಲಕ್ಷ್ಮಿ ವೇಣು ಅವರ ಬೇಡಿಕೆಯನ್ನು ಬಹಿರಂಗವಾಗಿ ಬೆಂಬಲಿಸಿರುವ ತಾಯಿ ಮಲ್ಲಿಕಾ ಶ್ರೀನಿವಾಸನ್, ಮಗ ಮತ್ತು ಮಗಳು ತನಗೆ ಇಬ್ಬರೂ ಸಮಾನರು ಎಂದು ಹೇಳಿದ್ದಾರೆ. ಸೌಹಾರ್ದಯುತ ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.
ಮಾತುಕತೆಗೆ ಒಲವು: ಕಾನೂನು ಹೋರಾಟದ ಜೊತೆಗೆ, ಕುಟುಂಬದ ಎಲ್ಲಾ ಸದಸ್ಯರ ಹಕ್ಕುಗಳನ್ನು ಗೌರವಿಸುವ ಮೂಲಕ ಮಾತುಕತೆ ಮೂಲಕವೇ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ತಾವು ಬಯಸುವುದಾಗಿ ಲಕ್ಷ್ಮಿ ವೇಣು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯು ಭಾರತೀಯ ಕಾರ್ಪೊರೇಟ್ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಟಿವಿಎಸ್ ಉದ್ಯಮ ಸಾಮ್ರಾಜ್ಯದಲ್ಲಿ ಆಸ್ತಿ ಹಂಚಿಕೆಯ ಕಿಚ್ಚು ತಾರಕಕ್ಕೇರಿದೆ.





Leave a comment