ಚೆನ್ನೈ: ತಮಿಳುನಾಡಿನ ಪ್ರಸಿದ್ಧ ತಿರುಚೆಂದೂರು ಮುರುಗನ್ ದೇವಸ್ಥಾನದಲ್ಲಿ ನಡೆದ ‘ಸೂರಸಂಹಾರಂ’ ಉತ್ಸವದ ವೇಳೆ ಪವಿತ್ರ ಭಕ್ತಿ ಘೋಷಣೆಯನ್ನು ರಾಜಕೀಯ ನಾಯಕರ ಕೊಂಡಾಡಲು ಬಳಸಿಕೊಂಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಮುರುಗನ್ ದೇವರಿಗೆ ಬಳಸುವ ‘ಅರೊಗರಾ’ ಘೋಷಣೆಯನ್ನು ಮುಖ್ಯಮಂತ್ರಿ ವಿಜಯ್ ಹಾಗೂ ಹಿಂದೂ ಧಮ೯ದಾಯ ದತ್ತಿ ಸಚಿವ ರಮೇಶ್ ಅವರ ಹೆಸರಿನೊಂದಿಗೆ ಕೂಗಲಾಗಿದ್ದು, ಇದು ತಮಿಳುನಾಡು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ದೇವಸ್ಥಾನದ ಧರ್ಮದಾಯ ದತ್ತಿ ಇಲಾಖೆ ಸಮಿತಿಯ ಸದಸ್ಯರಾಗಿರುವ ಗಾಯಕ ವೇಲುಮುರುಗನ್ ಅವರು ಉತ್ಸವದ ವೇಳೆ ಮುರುಗನ್ ಜೊತೆಗೆ ಸಿಎಂ ವಿಜಯ್ ಮತ್ತು ಸಚಿವ ರಮೇಶ್ ಪರವಾಗಿ ‘ಅರೊಗರಾ’ ಜಯಘೋಷ ಮೊಳಗಿಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೃತ್ಯವನ್ನು ಡಿಎಂಕೆ ಪಕ್ಷವು “ತಮಿಳುನಾಡು ಕಂಡ ಅತ್ಯಂತ ಕನಿಷ್ಠ ರಾಜಕಾರಣ” ಎಂದು ತೀವ್ರವಾಗಿ ಖಂಡಿಸಿದೆ.
ಪವಿತ್ರ ಘೋಷಣೆಯ ರಾಜಕೀಯ ಬಳಕೆ: ಮುರುಗನ್ ದೇವರ ಭಕ್ತಿಗೀತೆಯಾದ ‘ಅರೊಗರಾ’ ಘೋಷಣೆಯನ್ನು ರಾಜಕೀಯ ನಾಯಕರ ಸ್ತುತಿಗೆ ಬಳಸಿರುವುದು ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
ಡಿಎಂಕೆ ಆಗ್ರಹ: ಘಟನೆಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ನೇರ ಹೊಣೆ ಹೊತ್ತು ಕ್ಷಮೆ ಯಾಚಿಸಬೇಕು ಎಂದು ಡಿಎಂಕೆ ಪಕ್ಷವು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದು, ಸಚಿವರು ಹಾಗೂ ಇಲಾಖೆ ಆಯುಕ್ತರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.
ಬಿಜೆಪಿ ಖಂಡನೆ: ದೇವಾಲಯಗಳ ಉತ್ಸವಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ ಎಂದು ಬಿಜೆಪಿ ನಾಯಕ ಅಣ್ಣಾಮಲೈ ಎಚ್ಚರಿಕೆ ನೀಡಿದ್ದಾರೆ.
ಹಿಂದಿನ ವಿವಾದಗಳ ಹಿನ್ನೆಲೆ: ಗಾಯಕ ವೇಲುಮುರುಗನ್ ಅವರು ಈ ಹಿಂದೆಯೂ ಫೆಬ್ರವರಿಯಲ್ಲಿ ವಿಜಯ್ ಅವರ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮುರುಗನ್ ಭಕ್ತಿಗೀತೆಯನ್ನು ರಾಜಕೀಯ ಮೆಚ್ಚುಗೆಗಾಗಿ ಬಳಸಿ ಬಳಿಕ ಬೇಷರತ್ ಕ್ಷಮೆಯಾಚಿಸಿದ್ದರು ಎಂಬುದು ಇಲ್ಲಿ ಸ್ಮರಣಾರ್ಹ.
ಧಾರ್ಮಿಕ ಕ್ಷೇತ್ರಗಳನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಧೋರಣೆಯು ತಮಿಳುನಾಡು ರಾಜಕೀಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ.





Leave a comment