SUDDIKSHANA KANNADA NEWS/ DAVANAGERE/ DATE:26-12-2024
ದಾವಣಗೆರೆ: ಅತ್ಯಾಚಾರ ಕೇಸ್ ನಲ್ಲಿ ಜೈಲು ಸೇರಿ ಹೊರಗೆ ಬಂದು ನಾಟಕವಾಡುತ್ತಿರುವ ಶಾಸಕ ಮುನಿರತ್ನ ಕಟ್ಟುಕಥೆ ನಂಬುವಷ್ಟ ಕರ್ನಾಟಕದ ಜನರು ಮೂರ್ಖರಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುನಿರತ್ನ ಯಾವ ಕೇಸ್ ನಲ್ಲಿ ಜೈಲುಪಾಲಾಗಿದ್ದರು ಎಂಬುದು ಎಲ್ಲರಿಗೂ ಗೊತ್ತು. ರಾಜಕೀಯದ ಅಧಿಕಾರಕ್ಕೋಸ್ಕರ ಹೆಚ್ ಐ ವಿ ಸೋಂಕಿತರನ್ನು ಬಳಸಿ ಹನಿಟ್ರ್ಯಾಪ್ ಮಾಡಿದ ಆರೋಪವೂ ಕೇಳಿ ಬಂದಿತ್ತು. ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರು, ನಾಯಕರನ್ನು ಖೆಡ್ಡಾಕ್ಕೆ ಕೆಡವಲು ಯತ್ನಿಸಿದ್ದ ಬಗ್ಗೆ ಮಹಿಳೆ ಆರೋಪ ಮಾಡಿದ್ದರು. ಆದ್ರೆ, ಈಗ ಹೊಸ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರಿಗೆ ಮೊಟ್ಟೆ ಎಸೆದಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲ, ಅವರು ಬಿಜೆಪಿ ಕಾರ್ಯಕರ್ತರು. ಯಾಕೆಂದರೆ ತನ್ನ ಪಕ್ಷದ ನಾಯಕರನ್ನೇ ಹಾಳು ಮಾಡಲು ಹೊರಟಿದ್ದ ಮತ್ತು ಬೆದರಿಕೆಯೊಡ್ಡಿ ಸಚಿವರಾಗಿದ್ದ ಮುನಿರತ್ನ ಆ ಬಗ್ಗೆ ಮಾತನಾಡುತ್ತಿಲ್ಲ. ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸಹಜವಾಗಿಯೇ ಪಕ್ಷದ ಹೆಸರು, ಕ್ಷೇತ್ರದ ಜನರ ಮಸಿ ಬಳಿಯುವ ಕೆಲಸ ಮಾಡಿದ್ದಕ್ಕಾಗಿ ಮೊಟ್ಟೆ ಎಸೆದಿದ್ದಾರೆ. ಇದನ್ನು ರಾಜಕೀಯಗೊಳಿಸಿ ನಾಟಕವಾಡುತ್ತಾ ಜನರ ಸಿಂಪಥಿ ಗಳಿಸಲು ಡ್ರಾಮಾ ಮಾಡುತ್ತಿದ್ದಾರೆ. ಇಂಥದ್ದಕ್ಕೆಲ್ಲಾ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಮುನಿರತ್ನರಂಥವರಿಗೆ ಕಠಿಣ ಕಾನೂನು ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಮುನಿರತ್ನ ಶಾಸಕನಾಗಲು ಯೋಗ್ಯತೆ ಇಲ್ಲ. ಅತ್ಯಾಚಾರ, ಹನಿಟ್ರ್ಯಾಪ್, ಬೆದರಿಕೆ, ಮತದಾರರ ನಕಲಿ ವೋಟರ್ ಕಾರ್ಡ್ ಗಳು ಸೇರಿದಂತೆ ಹಲವು ಗುರುತರ ಆರೋಪಗಳಿವೆ. ಮೊದಲು ಇದರ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ. ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ರಾಜ್ಯಾದ್ಯಂತ ಸದ್ದು ಮಾಡಿತ್ತು. ಎಲ್ಲಿ ಈ ಪ್ರಕರಣ ತಮಗೆ ಹಿನ್ನೆಡೆ ತರುತ್ತದೆ ಎಂಬ ಕಾರಣಕ್ಕೆ ಮುನಿರತ್ನ ಪ್ರಕರಣ ಬಳಸಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಸೈಯದ್ ಖಾಲಿದ್ ಅಹ್ಮದ್ ಅನುಮಾನ ವ್ಯಕ್ತಪಡಿಸಿದ್ದಾರೆ.