Home ಕ್ರೈಂ ನ್ಯೂಸ್ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ: 7 ಪ್ರತ್ಯೇಕ ಎಫ್ಐಆರ್, ತಂದೆ ಸೇರಿ 7 ಜನರ ವಿರುದ್ಧ ಪೋಕ್ಸೋ ಕೇಸ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

10ನೇ ತರಗತಿ ವಿದ್ಯಾರ್ಥಿನಿ ಮೇಲೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ: 7 ಪ್ರತ್ಯೇಕ ಎಫ್ಐಆರ್, ತಂದೆ ಸೇರಿ 7 ಜನರ ವಿರುದ್ಧ ಪೋಕ್ಸೋ ಕೇಸ್!

Share
ವಿದ್ಯಾರ್ಥಿನಿ
Share

ಪತ್ತನಂತಿಟ್ಟ (ಕೇರಳ): ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, 10ನೇ ತರಗತಿಯ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆಕೆಯ ಸ್ವಂತ ತಂದೆ ಸೇರಿದಂತೆ ಏಳು ಜನರ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳ ಬಳಿ ಸತ್ಯ ಬಿಚ್ಚಿಟ್ಟ ವಿದ್ಯಾರ್ಥಿನಿ:

ಬಾಲಕಿಯು ತನ್ನ ಶಾಲೆಗೆ ತೆರಳಿ ಸಹಪಾಠಿಗಳ ಬಳಿ ತನಗಾಗುತ್ತಿದ್ದ ನರಕಯಾತನೆಯನ್ನು ಹಂಚಿಕೊಂಡಾಗ ಈ ದೌರ್ಜನ್ಯದ ಕರಾಳ ಮುಖ ಬಯಲಾಗಿದೆ. ತಕ್ಷಣವೇ ಶಾಲಾ ಮಂಡಳಿಯು ಮಕ್ಕಳ ಕ್ಷೇಮಾಭಿವೃದ್ಧಿ ಸಮಿತಿಗೆ (CWC) ಮಾಹಿತಿ ನೀಡಿದೆ. ನಂತರ ನಡೆಸಿದ ಕೌನ್ಸೆಲಿಂಗ್ ಹಾಗೂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

7 ಪ್ರತ್ಯೇಕ ಎಫ್‌ಐಆರ್:

ಬಾಲಕಿಯು 5ನೇ ತರಗತಿಯಲ್ಲಿದ್ದಾಗಿನಿಂದಲೇ ಬೇರೆ ಬೇರೆ ಸಮಯದಲ್ಲಿ ಹಾಗೂ ಬೇರೆ ಬೇರೆ ಸ್ಥಳಗಳಲ್ಲಿ ದೌರ್ಜನ್ಯ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು 7 ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ಒಬ್ಬರಿಗೊಬ್ಬರು ಪರಿಚಿತರಲ್ಲ ಹಾಗೂ ಸ್ವತಂತ್ರವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ವಶಕ್ಕೆ, ವಿದೇಶದಲ್ಲಿರುವ ತಂದೆಗೆ ಶೋಧ:

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ವಾಸವಿರುವ ಬಾಡಿಗೆ ಮನೆಯ ಮಾಲೀಕ ಹಾಗೂ ಅದೇ ಕಟ್ಟಡದ ಮತ್ತೊಬ್ಬ ನಿವಾಸಿಯನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ವಿದೇಶದಲ್ಲಿರುವ ಬಾಲಕಿಯ ತಂದೆಯನ್ನು ಭಾರತಕ್ಕೆ ಕರೆತಂದು ಕಾನೂನು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬಾತ ಈಗಾಗಲೇ ಮೃತಪಟ್ಟಿದ್ದು, ಆತನಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಶೀಘ್ರವೇ ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂಟಿತನದ ಲಾಭ ಪಡೆದ ಕಾಮುಕರು:

ಬಾಲಕಿಯ ತಾಯಿ ಲಾಟರಿ ಟಿಕೆಟ್ ಮಾರಾಟ ವೃತ್ತಿ ಮಾಡುತ್ತಿದ್ದು, ದಿನವಿಡೀ ಹೊರಗೇ ಇರುತ್ತಿದ್ದರು. ಬಾಲಕಿ ಮನೆಯಲ್ಲಿ ಒಂಟಿಯಾಗಿರುವುದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಈ ಕೃತ್ಯ ಎಸಗುತ್ತಿದ್ದರು. ಬಾಲಕಿಯ ವೈದ್ಯಕೀಯ ತಪಾಸಣೆ ಪೂರ್ಣಗೊಂಡಿದ್ದು, ಮ್ಯಾಜಿಸ್ಟ್ರೇಟ್ ಎದುರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಸ್ತುವಾರಿಯಲ್ಲಿ ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles