Home ದಾವಣಗೆರೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದೊರೆತ ಜಯ, ಕಾಂಗ್ರೆಸ್ಸಿಗರೇ ವೈಯಕ್ತಿಕ ಟೀಕೆ ಬಿಡಿ: ಯಶವಂತರಾವ್ ಜಾಧವ್ ಸಲಹೆ!
ದಾವಣಗೆರೆಬೆಂಗಳೂರು

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ದೊರೆತ ಜಯ, ಕಾಂಗ್ರೆಸ್ಸಿಗರೇ ವೈಯಕ್ತಿಕ ಟೀಕೆ ಬಿಡಿ: ಯಶವಂತರಾವ್ ಜಾಧವ್ ಸಲಹೆ!

Share
ಎನ್‌ಡಿಎ
Share

ದಾವಣಗೆರೆ: ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರಗಳಿಗೆ ಸಂಬಂಧಿಸಿದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆಯ ಫಲಿತಾಂಶಗಳು ಹೊರಬಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿರುವುದು ಮೈತ್ರಿಕೂಟಕ್ಕೆ ಮತ್ತಷ್ಟು ಬಲ ತುಂಬಿದೆ. ಈ ಗೆಲುವು ಎನ್‌ಡಿಎ ಮೈತ್ರಿಕೂಟದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸುವುದರ ಜೊತೆಗೆ, ಶಿಕ್ಷಕರು ಮತ್ತು ಪದವೀಧರರ ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯ ಫಲಿತಾಂಶವು ಕೇವಲ ಅಭ್ಯರ್ಥಿಗಳ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿರುವ ಮತದಾರರ ನಿರ್ಧಾರಕ್ಕೆ ದೊರೆತ ಮನ್ನಣೆಯಾಗಿದೆ
ಎಂದು ತಿಳಿಸಿದರು.

ಶಿಕ್ಷಕರು ಮತ್ತು ಪದವೀಧರರು ಸಮಾಜದ ಜವಾಬ್ದಾರಿಯುತ ವರ್ಗಗಳಾಗಿದ್ದು, ದೇಶದ ಭವಿಷ್ಯ, ಶಿಕ್ಷಣದ ಗುಣಮಟ್ಟ ಹಾಗೂ ಆಡಳಿತದ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅವರ ತೀರ್ಪು ರಾಜಕೀಯ ಪಕ್ಷಗಳಿಗೆ ಮಹತ್ವದ
ಸಂದೇಶವನ್ನು ನೀಡಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರು ಆಡಳಿತಾತ್ಮಕ ವಿಷಯಗಳನ್ನು ಬದಿಗಿಟ್ಟು, ದೇಶದ ಜನಪ್ರಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ, ಅನಗತ್ಯ ಆರೋಪಗಳಲ್ಲಿ ತೊಡಗಿರುವುದು ಸರಿಯಾದ ರಾಜಕೀಯ ಸಂಸ್ಕೃತಿಯಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಟೀಕೆಗಳು ಆಧಾರರಹಿತ ಆರೋಪಗಳಾಗದೆ, ಜನರ ಸಮಸ್ಯೆಗಳಿಗೆ ಸಂಬಂಧಿಸಿದ ರಚನಾತ್ಮಕ ಚರ್ಚೆಗಳಾಗಿರಬೇಕು. ದೇಶದ ಜನರು ಅಭಿವೃದ್ಧಿ, ಉತ್ತಮ ಆಡಳಿತ, ಶಿಕ್ಷಣ, ಉದ್ಯೋಗ, ಮೂಲಸೌಕರ್ಯ ಹಾಗೂ ಭವಿಷ್ಯದ ಭದ್ರತೆಯಂತಹ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಕೇವಲ ರಾಜಕೀಯ ಆರೋಪ-ಪ್ರತ್ಯಾರೋಪಗಳ ಮೂಲಕ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಎಂದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಇಂದು ಮೈತ್ರಿಕೂಟದ ಕೆಲವು ನಾಯಕರು ಎತ್ತುತ್ತಿರುವ ಆಕ್ಷೇಪಣೆಗಳು ಹಾಗೂ ಮಾಡುತ್ತಿರುವ ಆರೋಪಗಳ ಬಗ್ಗೆ, ಸಾರ್ವಜನಿಕವಾಗಿ ಸ್ಪಷ್ಟವಾದ ಚರ್ಚೆ ನಡೆಯಬೇಕು. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯವಾದ ವಿಷಯಗಳು ಎಂದು ಹೇಳಿದರು.

ಎನ್‌ಡಿಎ ಅಭ್ಯರ್ಥಿಗಳ ಗೆಲುವು ಮೈತ್ರಿಕೂಟದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಶಿಕ್ಷಕರು ಮತ್ತು ಪದವೀಧರರ ವಿಶ್ವಾಸವನ್ನು ಗಟ್ಟಿಗೊಳಿಸಿದೆ. ಆಧಾರರಹಿತ ವೈಯಕ್ತಿಕ ಟೀಕೆಗಳನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಕಾನೂನುಬದ್ಧ ಪರಿಹಾರ ಹಾಗೂ ರಚನಾತ್ಮಕ ಚರ್ಚೆಗಳನ್ನು ನಡೆಸುವಂತೆ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.

ಕಾಂಗ್ರೆಸ್ ಹಾಗೂ ಇಂದಿನ ಮೈತ್ರಿಕೂಟದ ನಾಯಕರು ಚುನಾವಣೆಯ ಫಲಿತಾಂಶವನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ರಾಜಕೀಯ ಧೋರಣೆಯನ್ನು ಮರುಪರಿಶೀಲಿಸಿಕೊಳ್ಳಬೇಕು. ಜನರ ತೀರ್ಪನ್ನು ಗೌರವಿಸಿ, ವೈಯಕ್ತಿಕ ಟೀಕೆಗಳು ಮತ್ತು ಆಧಾರರಹಿತ ಆರೋಪಗಳ ರಾಜಕೀಯದಿಂದ ಹೊರಬಂದು, ಅಭಿವೃದ್ಧಿ ಹಾಗೂ ಜನರ ಏಳಿಗೆಯ ಆಧಾರದ ಮೇಲೆ ರಾಜಕೀಯ ನಡೆಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಅಣಬೇರು ಜೀವನಮೂರ್ತಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles