ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಆಡಳಿತ ವ್ಯವಸ್ಥೆಯಲ್ಲಿ ಅರ್ಹತೆ, ಅನುಭವ ಹಾಗೂ ಸೇವಾ ಹಿರಿತನಗಳಿಗೆ ಯಾವುದೇ ಬೆಲೆಯಿಲ್ಲದಂತಾಗಿದೆ ಎಂದು ವಿಧಾನಮಂಡಲದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಿ ಹುದ್ದೆಗಳನ್ನು ಸಂತೆ ಸರಕಿನಂತೆ ಮಾರಾಟಕ್ಕಿಡಲಾಗಿದ್ದು, ಲಂಚಾವತಾರದ ಆಡಳಿತ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೆಳಹಂತದ ನೌಕರರಿಂದ ಹಿಡಿದು ಉನ್ನತ ಹುದ್ದೆಗಳವರೆಗೆ ನೇಮಕಾತಿ, ಪ್ರಮೋಷನ್ ಮತ್ತು ಪೋಸ್ಟಿಂಗ್‌ಗಳಿಗೆ ಪ್ರತ್ಯೇಕ ದರ ನಿಗದಿಪಡಿಸಿ ಅಕ್ರಮ ವಸೂಲಿ ದಂಧೆ ನಡೆಸಲಾಗುತ್ತಿದೆ ಎಂದು ನೇರ ಆರೋಪ ಮಾಡಿದರು.
ನೇಮಕಾತಿ ಮತ್ತು ಬಡ್ತಿ ಅಕ್ರಮ: ಸರ್ಕಾರಿ ನೌಕರರು ತಮ್ಮ ಹಕ್ಕಿನ ನೇಮಕಾತಿ ಹಾಗೂ ಸೇವಾ ಹಿರಿತನದ ಆಧಾರದ ಮೇಲೆ ಪ್ರಮೋಷನ್ ಪಡೆಯಲು ಕಿಸೆ ಬಿಸಿ ಮಾಡಬೇಕಾದ ವಾತಾವರಣ ಸೃಷ್ಟಿಯಾಗಿದೆ.
ವರ್ಗಾವಣೆ ದಂಧೆ: ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಅಥವಾ ಪೋಸ್ಟಿಂಗ್ ಪಡೆಯಲು ಪ್ರತ್ಯೇಕ ದರ ತೆರಬೇಕಾದ ಪರಿಸ್ಥಿತಿ ಬಂದೊದಗಿದೆ.
ಆಡಳಿತ ವೈಫಲ್ಯ: ಪ್ರಾಮಾಣಿಕತೆ ಮತ್ತು ಅರ್ಹತೆಗೆ ಬೆಲೆಯಿಲ್ಲದೆ, ಲಂಚ ನೀಡಲು ಸಿದ್ಧರಿರುವವರಿಗೆ ಮಾತ್ರ ಮಣೆ ಹಾಕುವ ವ್ಯವಸ್ಥೆಯನ್ನು ಸರ್ಕಾರ ಪೋಷಿಸುತ್ತಿದೆ.
ಭ್ರಷ್ಟಾಚಾರಕ್ಕೆ ಶೂನ್ಯ ಸಹನೆ ಎಂದು ಭಾಷಣ ಮಾಡುವ ನಾಯಕರು ತಮ್ಮ ಇಲಾಖೆಗಳಲ್ಲಿ ನಡೆಯುತ್ತಿರುವ ಲಂಚದ ಹಾವಳಿಗೆ ಮೊದಲು ಉತ್ತರಿಸಬೇಕು. ಪ್ರಾಮಾಣಿಕರಿಗೆ ಶಿಕ್ಷೆ ಹಾಗೂ ಲಂಚಕೋರರಿಗೆ ರಕ್ಷಣೆ ನೀಡುತ್ತಿರುವ ಈ ಸರ್ಕಾರಕ್ಕೆ ಕರ್ನಾಟಕದ ಜನತೆ ಶೀಘ್ರದಲ್ಲೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರ್. ಅಶೋಕ್ ಎಚ್ಚರಿಸಿದ್ದಾರೆ.





Leave a comment