ದಾವಣಗೆರೆ:ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಫಲಿತಾಂಶ ಸುಧಾರಿಸಲು ಮತ್ತು ಶಾಲಾ ಅವಧಿಯಲ್ಲಿ ಗುಣಮಟ್ಟದ ಬೋಧನೆಗೆ ಸಂಪೂರ್ಣ ಆದ್ಯತೆ ನೀಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಿಕ್ಷಣದ ಹಕ್ಕು ಕಾಯಿದೆಯಡಿ ಪ್ರತಿದಿನ ಶಾಲಾ ಹಂತದಲ್ಲಿ ನಿರಂತರ ಬೋಧನೆ ಮತ್ತು ಕಲಿಕೆ ನಡೆಯುವುದನ್ನು ಖಚಿತ ಪಡಿಸಿಕೊಳ್ಳಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಪಾಲಿಸಬೇಕಾದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದಾರೆ.
ಶಾಲಾ ದಿನಗಳಲ್ಲಿ ಹಾಗೂ ಶಾಲಾ ಸಮಯದಲ್ಲಿ ಯಾವುದೇ ಶಿಕ್ಷಕರನ್ನು ಅಥವಾ ಮುಖ್ಯೋಪಾಧ್ಯಾಯರನ್ನು ತರಬೇತಿ ಕಾರ್ಯಕ್ರಮ, ಕಾರ್ಯಾಗಾರ, ಸಭೆ ಅಥವಾ ಇತರೆ ಚಟುವಟಿಕೆಗಳಿಗೆ ಮೌಖಿಕ ಅಥವಾ ಲಿಖಿತ ಆದೇಶಗಳ ಮೂಲಕ ನಿಯೋಜನೆ (OOD) ಮಾಡಬಾರದು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂ ಸಹ ಇಂತಹ ಯಾವುದೇ ನಿರ್ದೇಶನಗಳನ್ನು ನೀಡುವಂತಿಲ್ಲ.
ಶಾಲಾ ಸಮಯದಲ್ಲಿ ಶಿಕ್ಷಕರ ಮತ್ತು ಮುಖ್ಯೋಪಾಧ್ಯಾಯರ ಯಾವುದೇ ಸಭೆಗಳನ್ನು ಕರೆಯುವಂತಿಲ್ಲ ಅಥವಾ ವಿಡಿಯೋ ಕಾನ್ಫರೆನ್ಸ್ (Video Conference) ನಡೆಸುವಂತಿಲ್ಲ. ಶಾಲೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ತರಗತಿಗಳ ಬೋಧನೆಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳತಕ್ಕದ್ದು.
ಯಾವುದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಶಾಲೆಯ ಹೊರಗಡೆ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಭಾಗವಹಿಸಲು ಕರೆದುಕೊಂಡು ಹೋಗಬಾರದು ಮತ್ತು ಆ ರೀತಿಯ ನಿರ್ದೇಶನಗಳನ್ನು ನೀಡಬಾರದು.
ಶಾಲಾ ದಿನಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC), ಇತರ ರಾಜ್ಯ/ ಕೇಂದ್ರ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳು ನಡೆಸುವ ಯಾವುದೇ ಬಾಹ್ಯ ಪರೀಕ್ಷೆಗಳನ್ನು ಶಾಲಾ ಆವರಣದಲ್ಲಿ ನಡೆಸಲು ಅವಕಾಶವಿರುವುದಿಲ್ಲ. ಇಂತಹ ಪರೀಕ್ಷೆಗಳನ್ನು ನಡೆಸಲು ಕೇವಲ ಸಾರ್ವಜನಿಕ ರಜೆ ಅಥವಾ ಬೇಸಿಗೆ ರಜೆಯ ಸಮಯದಲ್ಲಿ ಮಾತ್ರ ನಿಯಮಗಳಂತೆ ಅವಕಾಶ ನೀಡಬಹುದು. ಈ ನಿಬಂಧನೆ ಉಲ್ಲಂಘಿಸುವ ಅಧಿಕಾರಿಗಳು ಮತ್ತು ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.
ಖಾಸಗಿ ಸಂಸ್ಥೆಗಳ ಅಥವಾ ಯಾವುದೇ ಜ್ಞಾನ ಪಾಲುದಾರರ ಸಾಫ್ಟ್‌ವೇರ್‌ಗಳಲ್ಲಿ ಡೇಟಾ ಎಂಟ್ರಿ ಮಾಡುವಂತೆ ಶಿಕ್ಷಕರಿಗೆ ಅಥವಾ ಮುಖ್ಯೋಪಾಧ್ಯಾಯರಿಗೆ ಇಲಾಖೆಯ ಯಾವುದೇ ಮಟ್ಟದ ಅಧಿಕಾರಿಗಳು ಮೌಖಿಕ ಅಥವಾ ಲಿಖಿತ ಆದೇಶ ನೀಡುವಂತಿಲ್ಲ. ಆದೇಶ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಈ ಎಲ್ಲಾ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಇಲಾಖೆಯ ಆಯುಕ್ತರು, ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಉಪನಿರ್ದೇಶಕರು (DDPI), ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಮತ್ತು ಡಯಟ್ ಪ್ರಾಂಶುಪಾಲರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.
- Academic Quality Improvement
- Ban on Teacher Meetings
- DDPI BEO Implementation
- Karnataka School Education Department
- KPSC Exams in Schools Restricted
- No OOD for Government Teachers
- Non-academic Duties Ban.
- School Hours Guidelines
- Student External Programs Ban
- V Rashmi Mahesh IAS Circular
- ಕೆಪಿಎಸ್ಸಿ ಪರೀಕ್ಷೆ ನಿರ್ಬಂಧ
- ಡಿಡಿಪಿಐ
- ದಾವಣಗೆರೆ ಶಿಕ್ಷಣ ಇಲಾಖೆ ಮಾರ್ಗಸೂಚಿ
- ಬಿಇಒ ಕಟ್ಟುನಿಟ್ಟಿನ ಕ್ರಮ.
- ರಶ್ಮಿ ಮಹೇಶ್ ಸುತ್ತೋಲೆ
- ವಿದ್ಯಾರ್ಥಿಗಳ ಸುರಕ್ಷತೆ
- ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
- ಶಾಲಾ ಸಮಯದ ಸಭೆಗಳ ನಿಷೇಧ
- ಶಿಕ್ಷಕರ ಒಒಡಿ ನಿಷೇಧ
- ಸರ್ಕಾರಿ ಶಾಲೆ ಗುಣಮಟ್ಟ ಬೋಧನೆ





Leave a comment