ದಾವಣಗೆರೆ: ಅಪಘಾತಕ್ಕೀಡಾಗಿ ಗಾಯಗೊಂಡು ರಸ್ತೆಯ ಬದಿಯ ಚರಂಡಿಯಲ್ಲಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿ ಸೆರೆಹಿಡಿಯಲು ಮುಂದಾದ ವೇಳೆ ಅರಣ್ಯ ಸಿಬ್ಬಂದಿಯೊಬ್ಬರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ಆನಗೋಡು ಸಮೀಪದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಮಂಗಳವಾರ ನಡೆದಿದೆ.
ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಅರಣ್ಯ ಸಿಬ್ಬಂದಿ ಮರಳಸಿದ್ದಪ್ಪ ಅವರನ್ನು ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅದು ಗಾಯಗೊಂಡು ಹೆದ್ದಾರಿ ಬದಿಯ ಚರಂಡಿಯಲ್ಲಿ ನರಳಾಡುತ್ತಿತ್ತು. ಬೆಳಗ್ಗೆ ಸಾರ್ವಜನಿಕರು ಚಿರತೆ ಇರುವುದನ್ನು
ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಬಲೆ ಹಾಕುವ ಸಂದರ್ಭದಲ್ಲಿ ಏಕಾಏಕಿ ಚಿರತೆ ಸಿಬ್ಬಂದಿ
ಮೇಲೆ ಎರಗಿ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ಮರಳಸಿದ್ದಪ್ಪ ಅವರ ತೊಡೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕರೆದೊಯ್ದು
ತುರ್ತು ಚಿಕಿತ್ಸೆ ನೀಡಲಾಗಿದೆ.





Leave a comment