Home ದಾವಣಗೆರೆ ಗ್ರಾಮೀಣ ಜನರ ಆಸ್ತಿ ಹಕ್ಕುಗಳಿಗೇ ಕುತ್ತು ತರುತ್ತಿದೆಯಾ ಕಾಂಗ್ರೆಸ್ ಸರ್ಕಾರದ ಆಡಳಿತ? ಆಗುತ್ತಿರುವ ಸಮಸ್ಯೆಗಳೇನು?
ದಾವಣಗೆರೆನವದೆಹಲಿಬೆಂಗಳೂರು

ಗ್ರಾಮೀಣ ಜನರ ಆಸ್ತಿ ಹಕ್ಕುಗಳಿಗೇ ಕುತ್ತು ತರುತ್ತಿದೆಯಾ ಕಾಂಗ್ರೆಸ್ ಸರ್ಕಾರದ ಆಡಳಿತ? ಆಗುತ್ತಿರುವ ಸಮಸ್ಯೆಗಳೇನು?

Share
ಆಸ್ತಿ
Share

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂದಾಜು 1.50 ಕೋಟಿ ಆಸ್ತಿಗಳ ಪೈಕಿ ಕೋಟಿಗೂ ಅಧಿಕ ಆಸ್ತಿಗಳು ಇನ್ನೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗಿವೆ. ಆಸ್ತಿಗಳ ಸಮೀಕ್ಷೆ ನಡೆಸಿ ‘ಇ-ಸ್ವತ್ತು’ ನೀಡುವ ಉದ್ದೇಶದಿಂದ 2022ರಲ್ಲೇ ಆದೇಶ ಹೊರಡಿಸಿ, ನಾಲ್ಕು ವರ್ಷ ಕಳೆದರೂ ಸಮೀಕ್ಷೆ ನಡೆಸಲು ಸಾಧ್ಯವಾಗದಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಸಿಎಂ ಡಿ. ಕೆ. ಶಿವಕುಮಾರ್ ಅವರೇ ಈ ಗಂಭೀರ ಸಮಸ್ಯೆಗೆ ಉತ್ತರ ನೀಡಬೇಕು. ಈ ಸಮೀಕ್ಷೆಯಲ್ಲಿನ ವಿಳಂಬದಿಂದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು ಒಂದೆರಡಲ್ಲ ಎಂದು ತಿಳಿಸಿದ್ದಾರೆ.

ಆಸ್ತಿ ದಾಖಲೆಗಳ ಗೊಂದಲ:

ಆಸ್ತಿಗಳ ನಿಖರ ಸಂಖ್ಯೆ, ಸ್ವರೂಪ ಮತ್ತು ದಾಖಲೆಗಳ ಬಗ್ಗೆ ಸ್ಪಷ್ಟತೆಯಿಲ್ಲದೆ ಜನರು ತಮ್ಮ ಆಸ್ತಿಯ ಕಾನೂನುಬದ್ಧ ದಾಖಲೆಗಳನ್ನು ಪಡೆಯಲು ತೊಂದರೆ ಅನುಭವಿಸುವಂತಾಗಿದೆ.

ಎ-ಖಾತಾ ಪಡೆಯಲು ಪರದಾಟ:

ಬಿ-ಖಾತಾ ಹೊಂದಿರುವ ಆಸ್ತಿಗಳಿಗೆ ಎ-ಖಾತಾ ನೀಡುವ ಪ್ರಕ್ರಿಯೆಯಲ್ಲಿನ ಅನಿಶ್ಚಿತತೆಯಿಂದ ಜನರು ತಮ್ಮ ಆಸ್ತಿಯ ದಾಖಲೆಗಳನ್ನು ಕ್ರಮಬದ್ಧಗೊಳಿಸಲು ಕಾಯುವಂತಾಗಿದೆ.

ಆಸ್ತಿ ಮಾರಾಟ ಮತ್ತು ಸಾಲಕ್ಕೆ ಅಡ್ಡಿ:

ಖಾತಾ ಹಾಗೂ ದಾಖಲೆಗಳ ಗೊಂದಲದಿಂದ ಆಸ್ತಿ ಮಾರಾಟ, ಖರೀದಿ, ಬ್ಯಾಂಕ್ ಸಾಲ ಮತ್ತು ಇತರ ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆಯಿದೆ.

ಅನಧಿಕೃತ ಬಡಾವಣೆಗಳ ಸಮಸ್ಯೆ: ನಿಯಮಬಾಹಿರ ಅನುಮೋದನೆಗಳು ಹಾಗೂ ಮೂಲಸೌಕರ್ಯಕ್ಕಾಗಿ ಜಾಗ ಮೀಸಲಿಡದಿರುವ ಆರೋಪಗಳು ಗ್ರಾಮೀಣ ಪ್ರದೇಶಗಳ ಯೋಜಿತ ಅಭಿವೃದ್ಧಿಗೆ ಹಿನ್ನಡೆಯಾಗಿವೆ.

ತೆರಿಗೆ ಆದಾಯಕ್ಕೆ ನಷ್ಟ: ಕೋಟಿಗೂ ಅಧಿಕ ಆಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವುದರಿಂದ ಸ್ಥಳೀಯ ಸಂಸ್ಥೆಗಳ ಆದಾಯಕ್ಕೂ ಹೊಡೆತ ಬೀಳುತ್ತಿದೆ. ಇದರ ಪರಿಣಾಮವಾಗಿ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಾದ ಸಂಪನ್ಮೂಲಗಳ ಮೇಲೂ ಒತ್ತಡ ಉಂಟಾಗಬಹುದು.

ಇದಲ್ಲದೆ, ಅಂದಾಜು 1.50 ಕೋಟಿ ಆಸ್ತಿಗಳ ಪೈಕಿ 25 ಲಕ್ಷಕ್ಕೂ ಹೆಚ್ಚು ಬೋಗಸ್ ಆಸ್ತಿ ಐಡಿಗಳು ಇರುವ ಸಾಧ್ಯತೆಯಿದೆ ಎಂಬ ವರದಿಯೂ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು ಎತ್ತಿತೋರಿಸಿದೆ. ಪ್ರಶ್ನೆ ಇಷ್ಟೇ: ಇಷ್ಟು ವರ್ಷ ಕಳೆದರೂ ಸಮೀಕ್ಷೆ ಪೂರ್ಣಗೊಳಿಸಲಾಗದಿದ್ದರೆ, ಗ್ರಾಮೀಣ ಜನರು ತಮ್ಮ ಆಸ್ತಿ ದಾಖಲೆಗಳಿಗಾಗಿ ಇನ್ನೆಷ್ಟು ವರ್ಷ ಕಾಯಬೇಕು? ಎಂದು ಪ್ರಶ್ನಿಸಿದ್ದಾರೆ.

ಜನರಿಗೆ ಆಸ್ತಿ ದಾಖಲೆಗಳನ್ನು ಒದಗಿಸುವುದು, ಅರ್ಹರಿಗೆ ನಿಯಮಾನುಸಾರ ಖಾತಾ ನೀಡುವುದು, ಬೋಗಸ್ ಆಸ್ತಿ ಐಡಿಗಳನ್ನು ಪತ್ತೆಹಚ್ಚುವುದು ಹಾಗೂ ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯವಲ್ಲವೇ?
ಜನರಿಗೆ ಭರವಸೆಗಳಲ್ಲ, ಪರಿಹಾರ ಬೇಕು. ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಕ್ಕೆ ಉತ್ತರ ನೀಡಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲಿ! ಎಂದು ಬಿ. ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *