ಮೈಸೂರು: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ‘ಲಿ ಎಟಾಪೆ ಮೈಸೂರು’ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮೈಸೂರಿನ ಜನತೆಗೆ ಸುದೀರ್ಘ ಹಾಗೂ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.
ಮೈಸೂರಿನ ನೈಸರ್ಗಿಕ ಸೌಂದರ್ಯ, ರಸ್ತೆಗಳು ಮತ್ತು ಪಾರಂಪರಿಕ ಶ್ರೇಷ್ಠತೆಯನ್ನು ಕೊಂಡಾಡಿರುವ ಅವರು, ಯೋಜನಾರಹಿತ ನಗರೀಕರಣದಿಂದ ಮೈಸೂರನ್ನು ರಕ್ಷಿಸುವಂತೆ ನಾಲ್ಕು ಮುಖ್ಯ ಮನವಿಗಳನ್ನು ಮೈಸೂರು ನಿವಾಸಿಗಳ ಮುಂದಿಟ್ಟಿದ್ದಾರೆ.
ಅಸಂಘಟಿತ ಅಭಿವೃದ್ಧಿಯಿಂದಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಸಂಚಾರ ಹಾಗೂ ಪರಿಸರ ಸಂಕಷ್ಟಗಳನ್ನು ಉದಾಹರಣೆಯಾಗಿ ನೀಡಿದ ಸಂಸದರು, ಮೈಸೂರು ಅಂತಹ ತಪ್ಪುಗಳನ್ನು ಮರುಕಳಿಸಬಾರದು. ಸಾಂಸ್ಕೃತಿಕ ನಗರಿಯ ಅಸ್ತಿತ್ವ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಮೈಸೂರಿಗರ ಜವಾಬ್ದಾರಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮೇಲ್ಸೇತುವೆಗಳಿಗೆ ಸಂಪೂರ್ಣ ನಿಷೇಧ: ನಗರದ ಒಳಗಡೆ ಫ್ಲೈಓವರ್‌ಗಳನ್ನು ನಿರ್ಮಿಸಲು ಅವಕಾಶ ನೀಡಬೇಡಿ. ಇವು ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ, ಬದಲಿಗೆ ನಗರದ ಸೌಂದರ್ಯವನ್ನು ಹಾಳುಗೆಡುವ ಕಾಂಕ್ರೀಟ್ ರಾಕ್ಷಸರು.
ಭವಿಷ್ಯಕ್ಕಾಗಿ ಭೂಗತ ಮೆಟ್ರೋ : ಮೈಸೂರಿನ ಮುಂದಿನ ದಿನಗಳ ಸಾರಿಗೆ ಅಗತ್ಯಕ್ಕಾಗಿ ಸಂಪೂರ್ಣವಾಗಿ ಭೂಗತ ಮೆಟ್ರೋ ರೈಲು ವ್ಯವಸ್ಥೆಯನ್ನು ಯೋಜಿಸಿ. ಇದು ವೆಚ್ಚದಾಯಕವಾದರೂ ನಗರದ ಸೌಂದರ್ಯವನ್ನು ಕಾಪಾಡಲು ಅಗತ್ಯ.
ಉದ್ಯಾನ ಹಾಗೂ ಕೆರೆಗಳ ರಕ್ಷಣೆ: ಮೈಸೂರಿನ ಸುಂದರ ರಸ್ತೆಗಳು, ಸಾಲು ಮರಗಳು, ಉದ್ಯಾನವನಗಳು ಮತ್ತು ಕೆರೆಗಳನ್ನು ಯಾವುದೇ ಕಾರಣಕ್ಕೂ ಅಭಿವೃದ್ಧಿಯ ಹೆಸರಿನಲ್ಲಿ ನಾಶಪಡಿಸಲು ಬಿಡಬೇಡಿ.
ಪಾದಚಾರಿ ಸಂಸ್ಕೃತಿಯ ಉತ್ತೇಜನ: ಮೈಸೂರಿನಲ್ಲಿ ಇಂದಿಗೂ ಜೀವಂತವಾಗಿರುವ ಕಾಲ್ನಡಿಗೆ ಸಂಸ್ಕೃತಿಯನ್ನು ಕಾಪಾಡಿ. ಉತ್ತಮ ಪಾದಚಾರಿ ಮಾರ್ಗಗಳು, ನೆರಳಿನ ಕಾಲುದಾರಿಗಳು ಹಾಗೂ ಸುಸಜ್ಜಿತ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಒತ್ತು ನೀಡಿ.
ಬೆಂಗಳೂರು ನಗರೀಕರಣದಲ್ಲಿ ಮಾಡಿದ ತಪ್ಪುಗಳಿಂದ ಮೈಸೂರು ಪಾಠ ಕಲಿಯಬೇಕಿದೆ. ಅಭಿವೃದ್ಧಿ ಎಂದರೆ ಸೌಂದರ್ಯ ಮತ್ತು ಪರಂಪರೆಯನ್ನು ನಾಶಪಡಿಸುವುದಲ್ಲ. ಮುಂದಿನ ಪೀಳಿಗೆಗೆ ಮತ್ತಷ್ಟು ಸುಂದರವಾದ ಮೈಸೂರನ್ನು ಹಸ್ತಾಂತರಿಸಲು ಪ್ರತಿಯೊಬ್ಬ ನಾಗರಿಕನೂ ಜಾಗೃತರಾಗಬೇಕು ಎಂದು ತೇಜಸ್ವಿ ಸೂರ್ಯ ಅವರು ತಮ್ಮ ಪತ್ರವನ್ನು ಮುಕ್ತಾಯಗೊಳಿಸಿದ್ದಾರೆ.





Leave a comment