ದಾವಣಗೆರೆ: ನಗರದ ಮಾಗನಹಳ್ಳಿ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಆಜಾದ್ ನಗರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು ₹1,25000 ಮೌಲ್ಯದ 2.5 ಕಿಲೋಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ್ದ 2 ಬೈಕ್‌ಗಳು ಹಾಗೂ ₹280 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆ ನಿವಾಸಿಗಳಾದ ಅಬಿದ್ (29), ಸಿಕಂದರ್ ಬಾಷಾ (35), ಸಾಹಿಲ್ ಉರುಫ್ ಅಹಮದ್ ಅಲಿ (20) ಹಾಗೂ ಮಹಮದ್ ಸುಹೀಲ್ (22) ಬಂಧಿತ ಆರೋಪಿಗಳಾಗಿದ್ದಾರೆ.
ಅಕ್ಟೋಬರ್ 29ರಂದು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್, ಹೆಚ್ಚುವರಿ ಎಸ್‌ಪಿ ಪರಮೇಶ್ವರ ಹೆಗಡೆ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ಅವರ ಮಾರ್ಗದರ್ಶನದಲ್ಲಿ ಆಜಾದ್ ನಗರ ಪಿಐ ಸುರೇಶ್ ಹೆಚ್. ಯಳ್ಳೂರ್ ನೇತೃತ್ವದ ಪೊಲೀಸ್ ತಂಡ ಈ ದಾಳಿ ನಡೆಸಿದೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಅಕ್ರಮ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡವನ್ನು ಎಸ್‌ಪಿ ಶ್ಲಾಘಿಸಿದ್ದಾರೆ.
4 ಗಾಂಜಾ ಪೆಡ್ಲರ್‌ಗಳ ಬಂಧನ: ದಾವಣಗೆರೆಯ ಮಾಗನಹಳ್ಳಿ ರಸ್ತೆಯಲ್ಲಿ ದಾಳಿ ನಡೆಸಿ ಅಬಿದ್, ಸಿಕಂದರ್ ಬಾಷಾ, ಸಾಹಿಲ್ ಹಾಗೂ ಮಹಮದ್ ಸುಹೀಲ್ ಎಂಬ ನಾಲ್ವರ ಬಂಧನ.
ಸಾಮಗ್ರಿ ಜಪ್ತಿ: ₹1,25,000 ಮೌಲ್ಯದ 2.5 ಕೆಜಿ ಗಾಂಜಾ, 2 ಬೈಕ್ ಹಾಗೂ ನಗದು ಹಣ ವಶ.
ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ: ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.





Leave a comment