ನವದೆಹಲಿ: ಸಮಾಜವಾದಿ ಪಕ್ಷದ ಹಿರಿಯ ನಾಯಕಿ ಹಾಗೂ ಸಂಸದೆ ಜಯಾ ಬಚ್ಚನ್ ಮಾಧ್ಯಮ ಪ್ರತಿನಿಧಿಯೊಬ್ಬರ ಮೈಕ್ ತಳ್ಳಿ, ಉತ್ತರಿಸಲು ನಿರಾಕರಿಸಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ತೀವ್ರ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ‘ಇಂಡಿಯಾ’ ಒಕ್ಕೂಟದ ನಾಯಕರು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ ಈ ಘಟನೆ ಸಂಭವಿಸಿದೆ.
ಪ್ರತಿಭಟನೆಯ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓಬ್ರೇನ್ ಹಿಡಿದಿದ್ದ ಪ್ಲೇಕಾರ್ಡ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆಯ ವಿಷಯವಾಗಿ ವರದಿಗಾರರೊಬ್ಬರು ಜಯಾ ಬಚ್ಚನ್ ಅವರ ಬಳಿ ಪ್ರಶ್ನೆ ಕೇಳಿದರು. ಇದರಿಂದ ಕೋಪಗೊಂಡ ಜಯಾ ಬಚ್ಚನ್, “ವಿಷಯವನ್ನು ತಿರುಚಬೇಡಿ” ಎಂದರು. ವರದಿಗಾರ ಮತ್ತೊಮ್ಮೆ ‘ಅಸಲು ವಿಷಯ ಏನೆಂದು ತಿಳಿಸಿ’ ಎಂದು ಕೇಳಿದಾಗ, ಜಯಾ ಬಚ್ಚನ್ ಮೈಕ್ ಪಕ್ಕಕ್ಕೆ ತಳ್ಳಿ “ನಹಿ ಬತಾವುಂಗಿ” (ನಾನು ಹೇಳುವುದಿಲ್ಲ) ಎಂದು ಗರಂ ಆಗಿ ಉತ್ತರಿಸಿದ್ದರು. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.
ಈ ವೀಡಿಯೊ ತುಣುಕನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಂಗನಾ ರಣಾವತ್, ಜಯಾ ಬಚ್ಚನ್ ಅವರ ನಡವಳಿಕೆಯನ್ನು ಹಾಸ್ಯಾಸ್ಪದವಾಗಿ ಟೀಕಿಸಿದ್ದಾರೆ:
“ಇಡೀ ಜಗತ್ತಿನ ಮುಂದೆ ನಿಮ್ಮ ನಿಲುವನ್ನು ವ್ಯಕ್ತಪಡಿಸಲು ಧರಣಿ ಕುಳಿತುಕೊಳ್ಳುತ್ತೀರಿ. ಆದರೆ, ನೀವು ಯಾವ ವಿಚಾರಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಮಾಧ್ಯಮದವರು ಕೇಳಿದರೆ, ಜಯಾ ಬಿ ಜಿ – ‘ನಹಿ ಬತಾವುಂಗಿ’ ಎನ್ನುತ್ತಾರೆ”— ಎಂದು ಕಂಗನಾ ರಣಾವತ್ ಹಾಸ್ಯದ ಇಮೋಜಿಗಳೊಂದಿಗೆ ಬರೆದುಕೊಂಡಿದ್ದಾರೆ.
ಪ್ರತಿಭಟನೆಯ ಬಗ್ಗೆ ಮಾತನಾಡಿದ್ದ ಜಯಾ ಬಚ್ಚನ್, ತಮ್ಮ ಕಾಲುಗಳಲ್ಲಿ ಶಕ್ತಿ ಇರುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು. ಅದೇ ಸಮಯದಲ್ಲಿ ದೆಹಲಿಯಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ವಿಪಕ್ಷ ಸಂಸದರನ್ನು ದೆಹಲಿ ಪೊಲೀಸರು ಬಂಧಿಸಿ ಕಿಂಗ್ಸ್ವೇ ಕ್ಯಾಂಪ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.





Leave a comment