SUDDIKSHANA KANNADA NEWS/ DAVANAGERE/ DATE:11-02-2025
ದಾವಣಗೆರೆ: ತಾಲ್ಲೂಕಿನ ಕೈದಾಳೆ ಗ್ರಾಮದ ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾ ರಥೋತ್ಸವವು ಮಾ.4 ರಂದು ನೆರವೇರಲಿದೆ.
ಫೆ.26 ರಂದು ಬುಧವಾರ ಮಹಾಶಿವರಾತ್ರಿ ಜಾಗರಣೆ ಹಾಗೂ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ವಿಮಾನ ಗೋಪುರದ ಕಳಸಾರೋಹಣದ 14ನೇ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ಸ್ವಾಮಿಯ ಭಕ್ತರಿಂದ ಅಖಂಡ ಭಜನೆ, ರುದ್ರಾಭಿಷೇಕ ಮತ್ತು ಹೋಮವಿರುತ್ತದೆ. ಮತ್ತು ಬೆಳಿಗ್ಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಾನದಲ್ಲ ಪ್ರಸಾದ ವಿನಿಯೋಗವಿರುತ್ತದೆ.
ಫೆ.28 ರಂದು ಗಂಗಾ ಪೂಜೆಯೊಂದಿಗೆ ಶ್ರೀಮಠದ ಮನೆಯಿಂದ ಶ್ರೀಸ್ವಾಮಿಗೆ ಕಂಕಣ ಧಾರಣೆ. ಮಾ.2ರಂದು ಸಂಜೆ 6-30 ರಿಂದ ರೇವತಿ ನಕ್ಷತ್ರದಲ್ಲಿ ಗೋಧೂಳಿ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ ನೆರವೇರಲಿದ್ದು, ಮಾ.3 ರಂದು ಬೆಳಿಗ್ಗೆ 7-30 ರಿಂದ ಅಶ್ವಿನಿ ನಕ್ಷತ್ರದಲ್ಲಿ ಗಜ ಉತ್ಸವದೊಂದಿಗೆ ಬನ್ನಿ ಮಂಟಪ ಪೂಜೆ ನಡೆಯಲಿದೆ. ರಾತ್ರಿ 10-30ಕ್ಕೆ ರಥದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವಿದ್ದು, ರಾತ್ರಿ 11 ಗಂಟೆಗೆ ಶ್ರೀ ಸ್ವಾಮಿಯ ರಥಕ್ಕೆ ಅರಿಶಿಣ ಎಣ್ಣೆ ಧಾರಣೆ ಮಾಡಲಾಗುವುದು. ಮಾ.4 ರಂದು ಶುಕ್ಲಪಕ್ಷ ಪಂಚಮಿ ತಿಥಿ ಭರಣಿ ನಕ್ಷತ್ರದಲ್ಲಿ ಬೆಳಿಗ್ಗೆ 7.45 ರಿಂದ 8.15 ರ ವರೆಗೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮಹಾರಥೋತ್ಸವವನ್ನು ನೆರವೇರಿಸಲಾಗುವುದು.
ಅಂದು ಮಧ್ಯಾಹ್ನ 1ರಿಂದ ಸಂಜೆ 5 ರ ವರೆಗೆ ಜವಳ ಕಾರ್ಯಕ್ರಮ ಅಂದು ಮಧ್ಯಾಹ್ನ 3 ರಿಂದ ಸಂಜೆ 6-30 ರ ವರೆಗೆ ಜೋಡಿ ಬಸವಗಳ ಹಾಗೂ ಗ್ರಾಮದ ಟ್ರ್ಯಾಕ್ಟರ್ಗಳ ಮೂಲಕ ಮೆರವಣಿಗೆಯೊಂದಿಗೆ ಪಾನಕ ವಿತರಣೆ ಸಂಜೆ 5 ರಿಂದ ಸಂಜೆ 6-30 ರ ವರೆಗೆ ಅಗ್ನಿಕುಂಡ ಪೂಜೆ ಮತ್ತು ಓಕಳಿ ಹಾಗೂ ರಾತ್ರಿ 9-30 ರಿಂದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ, ವೀರಗಾಸೆ, ಪುರವಂತರ ಒಡಪು ಗೀತೆಗಳೊಂದಿಗೆ ಮುಂಜಾನೆ 2-30 ರಿಂದ ಬ್ರಾಹ್ಮ ಮುಹೂರ್ತದಲ್ಲಿ ಶ್ರೀಸ್ವಾಮಿಯು ನಡೆ ಮಡಿಯೊಂದಿಗೆ ಅಗ್ನಿಕುಂಡ ಪ್ರವೇಶ ಇರುತ್ತದೆ.
ಮಾ.5 ರಂದು ಸಂಜೆ 5 ಗಂಟೆಗೆ ಶ್ರೀ ಸ್ವಾಮಿಗೆ ದಿಬ್ಬಣ ಕಾರ್ಯಕ್ರಮವಿರುತ್ತದೆ. ರಾತ್ರಿ 9-30ಕ್ಕೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ನಾಟ್ಯ ಕಲಾಸಂಘ’ ಕೈದಾಳೆ ಇವರಿಂದ ಸಾಮಾಜಿಕ ನಾಟಕ ‘ಸಾವು ತಂದ ಸೌಭಾಗ್ಯ’ ಅರ್ಥಾತ್ ‘ ಅರಿಶಿಣ ತಂದ ಆಮಂತ್ರಣ’ ಪ್ರದರ್ಶನಗೊಳ್ಳಲಿದೆ ಎಂದು ಕೈದಾಳೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಟ್ರಸ್ಟ್ ಮಂಡಳಿ ತಿಳಿಸಿದೆ.
ಕೈದಾಳೆ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವದ ವೇಳೆ ಕುಡಿತ ಬಿಡಿಸುವ ದೇವರು ಎಂದು ಕರೆಯಲಾಗುತ್ತದೆ. ರಾಜ್ಯದ ನಾನಾ ಮೂಲೆಗಳಿಂದ ಮದ್ಯವ್ಯಸನಿಗಳನ್ನು ಕರೆದುಕೊಂಡು ಬರುತ್ತಾರೆ. ಇಲ್ಲಿ ದೇವರ ದರ್ಶನ ಮಾಡಿ ಗಂಟೆ ಹೊಡೆದ ಬಳಿಕ ಮದ್ಯ ಸೇವನೆ ಬಿಟ್ಟಿದ್ದಾರೆ. ಹಾಗಾಗಿ, ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಕುಡಿತ ಬಿಡಿಸುವ ಮಲ್ಲಿಕಾರ್ಜುನ ಅಂತಾನೇ ಫೇಮಸ್ ಆಗಿದೆ ಈ ದೇಗುಲ.