ಸೌತ್ ಕೊರಿಯಾ : ಹನಿಮೂನ್ ಹಾಗೂ ಪ್ರವಾಸೋದ್ಯಮಕ್ಕೆ ವಿಶ್ವಪ್ರಸಿದ್ಧವಾಗಿರುವ ದಕ್ಷಿಣ ಕೊರಿಯಾದ ಷೇಜು ದ್ವೀಪ ಪ್ರಸ್ತುತ ತೀವ್ರ ಆತಂಕ ಮತ್ತು ವಿವಾದದ ಕೇಂದ್ರಬಿಂದುವಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ನಾಪತ್ತೆಯಾಗಿದ್ದ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ದ್ವೀಪದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆಯು ಸ್ಥಳೀಯ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಹಾಗೂ ಅಕ್ರಮಗಳನ್ನು ಬಯಲಿಗೆಳೆದಿದ್ದು, ಇಲಾಖೆಯು ಈ ಹಿಂದೆ ಮುಚ್ಚಿಹಾಕಿದ್ದ 298 ನಾಪತ್ತೆ ಪ್ರಕರಣಗಳನ್ನು ಮರುಪರಿಶೀಲನೆಗೆ ಒಳಪಡಿಸಿದೆ.
ಘಟನೆಯ ವಿವರ:
ಮೇ 12 ರಂದು ನಾಪತ್ತೆಯಾಗಿದ್ದ 37 ವರ್ಷದ ಜಾಂಗ್ ಮಿ-ರಾನ್ (Jang Mi-ran) ಎಂಬ ಮಹಿಳೆಯ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದ ‘ಬು’ (Bu) ಎಂಬ ಸರ್ಜೆಂಟ್ ಮಟ್ಟದ ಪೊಲೀಸ್ ಅಧಿಕಾರಿ, ನಾಪತ್ತೆಯಾದ ಮಹಿಳೆಯ ಕುಟುಂಬದವರೊಂದಿಗೆ ಆಕೆ ಸುರಕ್ಷಿತವಾಗಿದ್ದಾಳೆ ಎಂದು ಸುಳ್ಳು ಹೇಳಿ ಪ್ರಕರಣವನ್ನು ಮುಚ್ಚಿಹಾಕಿದ್ದರು. ಆದರೆ, ಆಗಸ್ಟ್ 24 ರಂದು ಅದೇ ಮಹಿಳೆಯ ಮೃತದೇಹವು ಆಕೆಯ ಕೊಠಡಿಯಿಂದ 400 ಮೀಟರ್ ದೂರದಲ್ಲಿ ಕಳೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದರ ಬೆನ್ನಲ್ಲೇ ಜುಲೈನಲ್ಲಿ ನಾಪತ್ತೆಯಾಗಿದ್ದ 60 ವರ್ಷದ ವ್ಯಕ್ತಿಯ ಮೃತದೇಹವೂ ಪತ್ತೆಯಾಗಿದ್ದು, ಈ ಪ್ರಕರಣವನ್ನೂ ಸಹ ಅಧಿಕಾರಿಯು ಅಕ್ರಮವಾಗಿ ರದ್ದುಗೊಳಿಸಿದ್ದು ಬೆಳಕಿಗೆ ಬಂದಿದೆ. ಅಲ್ಲದೆ, ಸಮುದ್ರ ಮತ್ತು ಕಣಿವೆ ಪ್ರದೇಶಗಳಲ್ಲಿ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ:
ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಪೊಲೀಸ್ ಅಧಿಕಾರಿ ‘ಬು’ ವಿರುದ್ಧ ಕರ್ತವ್ಯ ಲೋಪ, ನಕಲಿ ದಾಖಲೆ ಸೃಷ್ಟಿ ಮತ್ತು ಮಾಹಿತಿ ಮುಚ್ಚಿಹಾಕಿದ ಆರೋಪದಡಿಯಲ್ಲಿ ಬಂಧನ ವಾರಂಟ್ ಹೊರಡಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣ ಕೊರಿಯಾದ ರಾಷ್ಟ್ರೀಯ ಪೊಲೀಸ್ ಏಜೆನ್ಸಿಯು ಷೇಜು ಸೆಬು ಪೊಲೀಸ್ ಠಾಣೆಯ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.
ಪ್ರಸ್ತುತ ನಾಲ್ಕೂ ಸಾವುಗಳಿಗೆ ಪರಸ್ಪರ ಕೊಂಡಿ ಅಥವಾ ಸೀರಿಯಲ್ ಕಿಲ್ಲಿಂಗ್‌ನ ಲಕ್ಷಣಗಳು ಕಂಡುಬಂದಿಲ್ಲವಾದರೂ, ಭದ್ರತಾ ವೈಫಲ್ಯ ಮತ್ತು ಪೊಲೀಸ್ ನಿರ್ಲಕ್ಷ್ಯದ ಕಾರಣದಿಂದಾಗಿ ಪ್ರವಾಸಿಗರಲ್ಲಿ ಆತಂಕ ಹೆಚ್ಚಾಗಿದೆ.





Leave a comment