ಬೆಂಗಳೂರು: “ನಾನೀಗ ಆತುರದ ವ್ಯಕ್ತಿ. ರಾಜ್ಯದ ಜನರು ಹಾಗೂ ದೇಶದ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾನು ಉತ್ತಮ ಆಡಳಿತ ನೀಡುವ ನಂಬಿಕೆ ಇಟ್ಟಿದ್ದಾರೆ. ರಾಜಕೀಯದಲ್ಲಿ ಎಲ್ಲವನ್ನೂ ಅರಗಿಸಿಕೊಳ್ಳಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂಡಿಯಾ ಟುಡೇ ರೌಂಡ್ ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಪ್ರಗತಿಯ ಮೂಲಕವೇ ಭಾರತದ ಅಭಿವೃದ್ಧಿ ಸಾಧ್ಯ. ಹೀಗಾಗಿ ಲಭ್ಯವಿರುವ ಸಮಯದಲ್ಲಿ ಉತ್ತಮ ಕೆಲಸ ಮಾಡಿ, ಪಕ್ಷ ಸಂಘಟಿಸಿ ಎಲ್ಲರಿಗೂ ಸಂದೇಶ ರವಾನಿಸಬೇಕು ಹಾಗೂ ಕರ್ನಾಟಕವನ್ನು ಇತರ ರಾಜ್ಯಗಳಿಗೆ ಮಾದರಿಯಾಗಿಸಬೇಕು ಎಂಬ ಪ್ರಯತ್ನದಲ್ಲಿದ್ದೇನೆ ಎಂದರು.
ಶಾಸಕರ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಅಸಮಾಧಾನವಿಲ್ಲ. ನಮ್ಮ ಎಲ್ಲಾ ಶಾಸಕರು ಮತ್ತು ಎಂಎಲ್‌ಸಿಗಳು ಸಚಿವರಾಗಲು ಹಾಗೂ ನಿಗಮ ಮಂಡಳಿ ಅಧ್ಯಕ್ಷರಾಗಲು ಅರ್ಹರಾಗಿದ್ದಾರೆ. ಆದರೆ ಎಲ್ಲರಿಗೂ ಒಂದೇ ಬಾರಿ ಅವಕಾಶ ನೀಡಲು ಸಾಧ್ಯವಿಲ್ಲ. ಹೈಕಮಾಂಡ್ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತದೆ” ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, “ಹಿಂದೆ ವೀರೇಂದ್ರ ಪಾಟೀಲ್ ಸರ್ಕಾರದಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಬಂಗಾರಪ್ಪ ಸಚಿವರಾಗಿರಲಿಲ್ಲ. ಕೃಷ್ಣ ಅವರ ಕಾಲದಲ್ಲಿ ಹಿರಿಯರು ಹೊರಗುಳಿದಿದ್ದರು. ಧರಂ ಸಿಂಗ್ ಕಾಲದಲ್ಲಿ ನಾನು ಹಾಗೂ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಅವರ ಆರಂಭಿಕ ಅವಧಿಯಲ್ಲಿ ನಾನು ಅವಕಾಶ ವಂಚಿತನಾಗಿದ್ದೆ. ಆದರೆ ಇಂದು ನಾನು ಸಿಎಂ, ಪರಮೇಶ್ವರ್ ಡಿಸಿಎಂ ಆಗಿದ್ದೇವೆ. ರಾಜಕೀಯದಲ್ಲಿ ಆಸೆ ಪಡುವುದು ತಪ್ಪಲ್ಲ, ಆದರೆ ಸನ್ನಿವೇಶ ಮತ್ತು ಪಕ್ಷದ ಪರಿಸ್ಥಿತಿಯನ್ನು ಅರಿತು ತಾಳ್ಮೆಯಿಂದಿರಬೇಕು” ಎಂದು ಕಿವಿಮಾತು ಹೇಳಿದರು.





Leave a comment