ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಗಂಭೀರ ಬೆಹುಗಾರಿಕೆ ಹಾಗೂ ದೇಶದ್ರೋಹದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಗೂಢಚಾರ ಸಂಸ್ಥೆಗೆ ಭಾರತೀಯ ಸೇನೆಯ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ 24 ವರ್ಷದ ಯುವಕನನ್ನು ಜಮ್ಮು-ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅಮನ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ. ಮೂಲಗಳ ಪ್ರಕಾರ, ಪಾಕಿಸ್ತಾನ ಮೂಲದ ಏಜೆಂಟ್‌ಗಳು ಈತನಿಗೆ ‘ಹನಿಟ್ರ್ಯಾಪ್’ (ಪ್ರೇಮದ ಬಲೆ) ಬೀಸಿ ತಮ್ಮ ಬಲೆಗೆ ಕೆಡವಿಕೊಂಡಿದ್ದರು. ನಂತರ ಈತನನ್ನು ಬಳಸಿಕೊಂಡು ಗಡಿ ಭಾಗ ಹಾಗೂ ಭಾರತೀಯ ಸೇನಾ ನೆಲೆಗಳ ಮೇಲೆ ಕಣ್ಣಿಡಲು ಸೂಚಿಸಲಾಗಿತ್ತು.
ಸೇನಾ ನೆಲೆಗಳ ಮೇಲೆ ಕಣ್ಣು, ಸಿಸಿಟಿವಿ ಅಳವಡಿಕೆ:
ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಸೂಚನೆಯಂತೆ ಅಮನ್, ಸೇನಾ ನೆಲೆಗಳ ರಹಸ್ಯ ಪ್ರದೇಶಗಳ ರೇಖಾಚಿತ್ರ, ಫೋಟೋ ಹಾಗೂ ವಿಡಿಯೋ ತುಣುಕುಗಳನ್ನು ಸಂಗ್ರಹಿಸಿ ರವಾನಿಸುತ್ತಿದ್ದ. ಅಷ್ಟೇ ಅಲ್ಲದೆ, ಗಡಿ ರಸ್ತೆಯ ಚಲನವಲನಗಳ ಮೇಲೆ ಕಣ್ಣಿಡಲು ತನ್ನ ಮನೆಯ ಹೊರಗೆ ಸಿಮ್ ಆಧಾರಿತ ಸಿಸಿಟಿವಿ (SIM-based CCTV) ಕ್ಯಾಮೆರಾವನ್ನು ಅಳವಡಿಸಿದ್ದ. ಈ ಕ್ಯಾಮೆರಾ ಅಳವಡಿಸಲು ಪಾಕಿಸ್ತಾನಿ ಏಜೆಂಟ್‌ಗಳಿಂದ ಈತ ₹20,000 ಹಣ ಪಡೆದಿದ್ದ ಎನ್ನಲಾಗಿದೆ.
ಪೊಲೀಸ್ ಕಾರ್ಯಾಚರಣೆ ಹಾಗೂ ತನಿಖೆ:
ಆರೋಪಿಯ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ತಿಳಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಅಮನ್‌ನನ್ನು ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಜಪ್ತಿ ಮಾಡಲಾಗಿದೆ. ಈ ಜಾಲದಲ್ಲಿ ಇನ್ನಷ್ಟು ಸ್ಥಳೀಯರು ಭಾಗಿಯಾಗಿದ್ದಾರೆಯೇ ಮತ್ತು ಎಷ್ಟು ಪ್ರಮಾಣದ ರಹಸ್ಯ ಮಾಹಿತಿ ಸೋರಿಕೆಯಾಗಿದೆ ಎಂಬುದರ ಕುರಿತು ಭದ್ರತಾ ಪಡೆಗಳು ತೀವ್ರ ತನಿಖೆ ನಡೆಸುತ್ತಿವೆ.





Leave a comment