ಬೆಂಗಳೂರು: ಟಿ. ನರಸೀಪುರದ ಈ ಪ್ರಕರಣ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ಮತ್ತು ಹಿಂದೂ ವಿರೋಧಿ ಆಡಳಿತ ಮನಸ್ಥಿತಿಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಂತಿ ಸಭೆಯನ್ನು ವರದಿ ಮಾಡಲು ಸ್ಥಳೀಯ ಮಾಧ್ಯಮದ ಪ್ರತಿನಿಧಿಯನ್ನು ಠಾಣೆಯಿಂದಲೇ ಕರೆಯಲಾಗಿತ್ತು. ಅದೇ ಸಭೆಯ ವಿಡಿಯೋ ಪ್ರಸಾರವಾದ ಬಳಿಕ, ಇದೀಗ ಆ ವಿಡಿಯೋ ಮಾಡಿದ್ದ ಪತ್ರಕರ್ತನ ಮೇಲೆಯೇ FIR ದಾಖಲಿಸಲಾಗಿದೆ. ಇದು ಯಾವ ನ್ಯಾಯ? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಉತ್ತರಿಸಿ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿನ ಪೊಲೀಸ್ ಅಧಿಕಾರಿಯ ಹೇಳಿಕೆ ಸರಿಯಾಗಿತ್ತು, ಕಾನೂನುಬದ್ಧವಾಗಿತ್ತು ಎಂದು ಇಡೀ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಮರ್ಥಿಸಿಕೊಳ್ಳುತ್ತಿದ್ದರೆ, ಆ ಹೇಳಿಕೆಯನ್ನು ವರದಿ ಮಾಡಿದ ಪತ್ರಕರ್ತನ ವಿರುದ್ಧ FIR ದಾಖಲಿಸಿರುವುದರ ಆಧಾರವೇನು? ಸಭೆಯಲ್ಲಿ ಆಡಿದ ಮಾತನ್ನೇ ದಾಖಲಿಸಿ ಪ್ರಸಾರ ಮಾಡಲಾಗಿದೆ. ಮಾಧ್ಯಮದ ಬಾಯಿ ಮುಚ್ಚಿಸಲು FIR ಎಂಬ ಅಸ್ತ್ರ ಪ್ರಯೋಗಿಸುವುದು ಯಾವ ಪಾಳೇಗಾರಿಕೆ ಮನಸ್ಥಿತಿ? ಇದು ಕೇವಲ ಒಬ್ಬ ಪತ್ರಕರ್ತನ ವಿಷಯವಲ್ಲ. ಇದು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ಮಾಧ್ಯಮ ಸ್ವಾತಂತ್ರ್ಯ ಎಲ್ಲಿದೆ? ಪ್ರಶ್ನಿಸುವ ಹಕ್ಕು ಎಲ್ಲಿದೆ? ಸರ್ಕಾರದ ಕ್ರಮಗಳನ್ನು ವರದಿ ಮಾಡುವ ಸ್ವಾತಂತ್ರ್ಯ ಎಲ್ಲಿದೆ? ಇದೇನು ತುರ್ತು ಪರಿಸ್ಥಿತಿ ಕಾಲವೇ? ಎಂದು ಪ್ರಶ್ನಿಸಿದ್ದಾರೆ.
ಹಿಂದೂಗಳು ತಮ್ಮ ಹಬ್ಬಗಳನ್ನು ಆಚರಿಸಲು ಸರ್ಕಾರದ ಅನುಮತಿ, ಅಧಿಕಾರಿಗಳ ಅನುಮತಿ, ಪೊಲೀಸರ ಅನುಮತಿ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಆಡಿದ ಮಾತುಗಳನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಿದರೆ ಪತ್ರಕರ್ತರ ಮೇಲೆ FIR!.ಹಿಂದೂಗಳ ಹಕ್ಕುಗಳ ಮೇಲೆ ನಿರ್ಬಂಧ, ಪ್ರಶ್ನಿಸುವ ಮಾಧ್ಯಮದ ಮೇಲೆ ಪ್ರಕರಣ — ಇದೇನಾ ಕಾಂಗ್ರೆಸ್ ಸರ್ಕಾರದ ‘ಜಾತ್ಯತೀತ’ ಆಡಳಿತ? ಇತ್ತೀಚೆಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದಾಗ, ನನ್ನ ವಿರುದ್ಧ ಜಾತಿಯ ವಿಚಾರವನ್ನು ಮುಂದಿಟ್ಟಿದ್ದ ಇದೇ ಕಾಂಗ್ರೆಸ್ ಸರ್ಕಾರ ಇಂದು ಒಬ್ಬ ದಲಿತ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿರುವುದು ಎಷ್ಟು ಸರಿ? ದಲಿತರ ಹೆಸರಿನಲ್ಲಿ ರಾಜಕೀಯ ಬೆಳೆ ಬೇಯಿಸಲು ಯತ್ನಿಸುವ ಕಾಂಗ್ರೆಸ್ಗೆ ದಲಿತ ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ ಕಾಣುವುದಿಲ್ಲವೇ ಅಥವಾ ಕುರುಡನಂತೆ ನಾಟಕ ಮಾಡುತ್ತಿದೆಯೇ..?? ನಾನು ವಿರೋಧ ಪಕ್ಷದ ನಾಯಕನಾಗಿ ಸ್ಪಷ್ಟವಾಗಿ ಹೇಳುತ್ತೇನೆ. ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ತಂದರೆ, ಪತ್ರಕರ್ತರನ್ನು ಬೆದರಿಸಿದರೆ, ಪ್ರಶ್ನಿಸುವ ಧ್ವನಿಯನ್ನು FIR ಮೂಲಕ ಹತ್ತಿಕ್ಕಲು ಪ್ರಯತ್ನಿಸಿದರೆ — ನಾನು ಮಾಧ್ಯಮದವರೊಂದಿಗೆ ಸದಾ ನಿಲ್ಲುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರೇ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಪತ್ರಕರ್ತ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ತನಿಖೆ ನಡೆಯಲಿ. ಆದರೆ ಅಧಿಕಾರಿಗಳ ಹೇಳಿಕೆಯನ್ನು ದಾಖಲಿಸಿ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತನನ್ನೇ ಆರೋಪಿ ಮಾಡುವ ಕ್ರಮ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲು ಹಿಂದೂಗಳ ಹಕ್ಕುಗಳ ಬಗ್ಗೆ ಉತ್ತರಿಸಲಿ. ನಂತರ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಉತ್ತರಿಸಲಿ ಎಂದಿದ್ದಾರೆ.
ಸಂವಿಧಾನವನ್ನು ಗೌರವಿಸುತ್ತೀರೋ, ಅಥವಾ ಅಧಿಕಾರದ ಅಹಂಕಾರವನ್ನೇ ಸಂವಿಧಾನಕ್ಕಿಂತ ಮೇಲಿಡುತ್ತೀರೋ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಲಿ. ಸರ್ಕಾರ ಕೂಡಲೇ ಈ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, FIR ದಾಖಲಿಸಿರುವ ಆಧಾರವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು. ಮಾಧ್ಯಮದ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವವನ್ನು ಸದ್ದಡಗಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.





Leave a comment