
ನವದೆಹಲಿ:ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ 65 ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದು, ಈ ಪೈಕಿ ಸುಮಾರು 55 ಮಂದಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಉಳಿದ 10 ಉಗ್ರರು ದೊಡ್ಡ ಸಂಘಟನೆಗಳ ಬೆಂಬಲಿತ ಸಣ್ಣ ಗುಂಪುಗಳಿಗೆ ಸೇರಿದವರಾಗಿದ್ದಾರೆ ಎನ್ನಲಾಗಿದೆ.
ಕಣಿವೆಯಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಶೂನ್ಯಕ್ಕೆ ಇಳಿದಿರುವ ಬೆನ್ನಲ್ಲೇ, ಭದ್ರತಾ ಪಡೆಗಳು ವಿದೇಶಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಕಳೆದ ಎರಡು ವರ್ಷಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಸುಮಾರು ಅರ್ಧ ಡಜನ್ ಸ್ಥಳೀಯ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಹೊಸ ನೇಮಕಾತಿಯೂ ಸಂಪೂರ್ಣ ಸ್ಥಗಿತಗೊಂಡಿದೆ. ಇತ್ತೀಚೆಗೆ ಲತೀಫ್ ಎಂಬ ಉಗ್ರನ ಎನ್ಕೌಂಟರ್ ಬಳಿಕ ಕಾಶ್ಮೀರ ಕಣಿವೆಯು ಸ್ಥಳೀಯ ಉಗ್ರರಿಂದ ಮುಕ್ತವಾಗಿದೆ ಎಂದು ಭದ್ರತಾ ಸಂಸ್ಥೆಗಳು ಘೋಷಿಸಿವೆ.
ವಿದೇಶಿ ಉಗ್ರರ ಒಳನುಸುಳುವಿಕೆ: ಪಾಕಿಸ್ತಾನದಿಂದ ಇತ್ತೀಚೆಗೆ ಒಳನುಸುಳಿರುವ ಸುಮಾರು 65 ವಿದೇಶಿ ಉಗ್ರರು ಕಣಿವೆಯಲ್ಲಿ ಭಯೋತ್ಪಾದಕ ಜಾಲವನ್ನು ಪುನರುಜ್ಜೀವನಗೊಳಿಸಲು ಸಂಚು ರೂಪಿಸುತ್ತಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ 80ಕ್ಕೂ ಹೆಚ್ಚು ನೆಲೆಗಳು: ಪಹಲ್ಗಾಮ್ ದಾಳಿಯ ನಂತರ 10,000 ಅಡಿಗಳಿಗಿಂತ ಎತ್ತರದ ದುರ್ಗಮ ಪರ್ವತ ಪ್ರದೇಶಗಳಲ್ಲಿ ಸೇನೆ, ಸಿಆರ್ಪಿಎಫ್ ಮತ್ತು ಪೊಲೀಸರ 80ಕ್ಕೂ ಹೆಚ್ಚು ತಾತ್ಕಾಲಿಕ ಕಾರ್ಯಾಚರಣೆ ನೆಲೆಗಳನ್ನು (TOBs) ಸ್ಥಾಪಿಸಲಾಗಿದೆ.
ಅಡಗುತಾಣಗಳ ಮೇಲೆ ನಿಗಾ: ಅರಣ್ಯ, ಗುಹೆಗಳು ಮತ್ತು ಕುರಿಗಾಹಿಗಳು ಬಳಸುವ ‘ಧೋಕ್’ (ಮಣ್ಣು-ಕಲ್ಲಿನ ಶೆಲ್ಟರ್) ಗಳಲ್ಲಿ ಅಡಗಿರುವ ಉಗ್ರರ ಪತ್ತೆಗೆ ಸ್ಥಳೀಯ ಮಾಹಿತಿದಾರರ ನೆರವಿನೊಂದಿಗೆ ಶೋಧ ತೀವ್ರಗೊಳಿಸಲಾಗಿದೆ.
ಸಾಂಪ್ರದಾಯಿಕ ಸಂವಹನ ಸಾಧನಗಳನ್ನು ಬಳಸದೆ ತಲೆಮರೆಸಿಕೊಂಡಿರುವ ವಿದೇಶಿ ಉಗ್ರರನ್ನು ಮಟ್ಟಹಾಕಲು ಭದ್ರತಾ ಪಡೆಗಳು ಸ್ಥಳೀಯ ಗುಪ್ತಚರ ಮಾಹಿತಿಯನ್ನು ಅವಲಂಬಿಸಿವೆ. ಇದೇ ವೇಳೆ, ಉಗ್ರರಿಗೆ ನೆರವು ನೀಡುತ್ತಿರುವ ಶಂಕಿತ ಸ್ಥಳೀಯ ಸಹಚರರು ಮತ್ತು ಓವರ್ಗ್ರೌಂಡ್ ವರ್ಕರ್ಸ್ (OGWs) ಚಲನವಲನಗಳ ಮೇಲೂ ತೀವ್ರ ನಿಗಾ ಇರಿಸಲಾಗಿದೆ.
- counterterrorism operations
- foreign terrorists
- Indian Army
- Jaish-e-Mohammed
- Jammu and Kashmir
- Kashmir local militants zero
- Lashkar-e-Taiba
- Temporary Operating Bases
- Temporary Operating Basesಜಮ್ಮು ಮತ್ತು ಕಾಶ್ಮೀರ
- ಜಮ್ಮು ಮತ್ತು ಕಾಶ್ಮೀರ
- ಜೈಶ್-ಎ-ಮೊಹಮ್ಮದ್
- ಪಾಕಿಸ್ತಾನ ಉಗ್ರರು
- ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ
- ಭಾರತೀಯ ಸೇನೆ
- ಲಷ್ಕರ್-ಎ-ತೊಯ್ಬಾ
- ವಿದೇಶಿ ಉಗ್ರರು




