
ಬೆಂಗಳೂರು: ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ತಮ್ಮ ಕಂದಮ್ಮಗಳೊಂದಿಗೆ ಫ್ರೀಡಂ ಪಾರ್ಕ್‌ನಲ್ಲಿ 8ನೇ ದಿನವೂ ಅಹೋರಾತ್ರಿ ಧರಣಿ ಮುಂದುವರಿಸಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಅತ್ಯಂತ ಖಂಡನೀಯ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ.
ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲಾ ಕಂಠಿಹಾರ ಕೊಡಲು ಆಗಲ್ಲ ಎಂದು ಸಚಿವ ಪಿ.ಎಂ. ನರೇಂದ್ರಸ್ವಾಮಿ ನೀಡಿರುವ ಹೇಳಿಕೆ ಮತ್ತು ವಿದೇಶದಿಂದ ವೀಡಿಯೋ ಕಾಲ್ ಮೂಲಕ ‘ಮನವೊಲಿಕೆ’ ನಾಟಕ ಆಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆ ಬೇಜವಾಬ್ದಾರಿತನದ ಪರಮಾವಧಿ ಎಂದು ಅವರು ಆಪಾದಿಸಿದ್ದಾರೆ.
ಶಾಲೆಯಲ್ಲಿ ಇರಬೇಕಾದ ಹಸುಗೂಸುಗಳು ಚಳಿ-ಮಳೆಗೆ ನಡುಗುತ್ತಿದ್ದರೂ ಸರ್ಕಾರ ಅಧಿವೇಶನದ ಬಳಿಕ ನೋಡೋಣ ಎಂದು ಉಡಾಫೆ ಉತ್ತರ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.
ಕಂಠಿಹಾರದ ಹೇಳಿಕೆಗೆ ಆಕ್ರೋಶ: ಹಗಲಿರುಳು ಜನರ ಆರೋಗ್ಯಕ್ಕಾಗಿ ದುಡಿಯುವ ಮಹಿಳೆಯರ ಶ್ರಮಕ್ಕೆ ಸಚಿವ ನರೇಂದ್ರಸ್ವಾಮಿ ಅವರ ‘ಕಂಠಿಹಾರ’ದ ಸಬೂಬು ಘೋರ ಅವಮಾನವಾಗಿದ್ದು, ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳೊಂದಿಗೆ ಬೀದಿಗಿಳಿದು ಹೋರಾಟ: ಆಶಾ ಕಾರ್ಯಕರ್ತೆಯರು ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕಿನ ಗೌರವಧನಕ್ಕಾಗಿ ಹೋರಾಡುತ್ತಿದ್ದಾರೆ. 8 ದಿನಗಳಿಂದ ಮುಂದುವರಿದಿರುವ ಈ ಅಮಾನವೀಯ ಧರಣಿಯನ್ನು ಸರ್ಕಾರ ಕೂಡಲೇ ಅಂತ್ಯಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ಬೇಜವಾಬ್ದಾರಿ ಧೋರಣೆ: ಮಳೆಯಲ್ಲಿ ನೆನೆದು ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಯರ ಸಮಸ್ಯೆ ಬಗೆಹರಿಸುವ ಬದಲು, ವಿದೇಶದಿಂದ ವೀಡಿಯೋ ಕಾಲ್ ಮಾಡುತ್ತಿರುವ ಡಿಕೆ ಶಿವಕುಮಾರ್ ನಡೆ ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ನ್ಯಾಯಕ್ಕಾಗಿ ಬೀದಿಗಿಳಿದಿರುವ ಆಶಾ ಕಾರ್ಯಕರ್ತೆಯರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಿ, ತಕ್ಷಣವೇ ಮಧ್ಯಪ್ರವೇಶಿಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿರುವ ಆರ್. ಅಶೋಕ್, ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಘೋಷಿಸಿದ್ದಾರೆ.




