ದಾವಣಗೆರೆ: ಅಂಗಡಿ ಬಳಿ ನಿಂತಿದ್ದ ಮಹಿಳೆಯ ಕೊರಳಿನಿಂದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ಇರಾನಿ ಗ್ಯಾಂಗ್‌ನ ಇಬ್ಬರು ಅಂತರ್ ರಾಜ್ಯ ಸರಗಳ್ಳರನ್ನು ಬಂಧಿಸುವಲ್ಲಿ ಜಗಳೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೈಯದ್ ಅಬ್ಬಾಸ್ ಆಲಿ ಅಲಿಯಾಸ್ ಕೋಡಿ (45) ಹಾಗೂ ಹುಸೇನ್ ಭಾಷಾ (38) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ₹4 ಲಕ್ಷ ರೂಪಾಯಿ ಮೌಲ್ಯದ 42 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ವಿವರ:
ದಿನಾಂಕ 01-11-2025 ರಂದು ಬೆಳಿಗ್ಗೆ ಸುಮಾರು 9.45 ರ ವೇಳೆಗೆ ಜಗಳೂರು ತಾಲೂಕಿನ ಕಮಂಡಲಗೊಂದಿ ಗ್ರಾಮದ ನಿವಾಸಿ ಗೀತಮ್ಮ ಅವರು ತಮ್ಮ ಅಂಗಡಿಯಲ್ಲಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ‘ವಿಮಲ್’ ಪ್ಯಾಕೆಟ್ ಖರೀದಿಸಿ ಹಣ ನೀಡಿದ್ದಾರೆ. ಗೀತಮ್ಮನವರು ಹಣವನ್ನು ಪಡೆದುಕೊಂಡು ಮನೆಯೊಳಗೆ ಹೋಗುತ್ತಿದ್ದಂತೆ, ಹಿಂಬದಿಯಿಂದ ಬಂದ ಆರೋಪಿಗಳು ಅವರ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಎಳೆದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಕುರಿತು ಗೀತಮ್ಮ ಅವರು ನೀಡಿದ ದೂರಿನನ್ವಯ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರ ಮಿಂಚಿನ ಕಾರ್ಯಾಚರಣೆ:
ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. , ಹೆಚ್ಚುವರಿ ಎಸ್ಪಿ ಪರಮೇಶ್ವರ ಹೆಗಡೆ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಬಸವರಾಜ್ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಜಗಳೂರು ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಸಿದ್ರಾಮಯ್ಯ ನೇತೃತ್ವದ ಪೊಲೀಸ್ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದೆ.





Leave a comment