SUDDIKSHANA KANNADA NEWS/ DAVANAGERE/ DATE:16-03-2024
ದಾವಣಗೆರೆ: ದರೋಡೆ ಮಾಡುವ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಆಜಾದ್ ನಗರ ಪೊಲೀಸರು ಸೆರೆ ಹಿಡಿದಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನ ಸೇರಿದಂತೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಕರ್ಮಳ ತಾಲೂಕಿನ ಸೇಲ್ ಗಾವ್ ನ ಕೂಲಿ ಕಾರ್ಮಿಕ ದುರ್ಯೋಧನ (50), ಅಹ್ಮದ್ ನಗರ ಜಿಲ್ಲೆಯ ಕರ್ಜತ್ ತಾಲೂಕಿನ ಮಾಳಂಗಿ ಗ್ರಾಮದ ರಮೇಶ ಸೋಪಾನ (36), ಲಕ್ಷ್ಮಣ್ (62), ಸಾತಾರ ತಾಲೂಕಿನ ಸೈದಾಪುರ ಗ್ರಾಮದ ಚಾಲಕ ಲಕ್ಷ್ಮಣ್ ಜಾಧವ್ ಶ್ರ(32) ಗಣೇಶ ಶ್ರ(37) ಬಂಧಿತ ಆರೋಪಿಗಳು. ಎಲ್ಲರೂ ಮಹಾರಾಷ್ಟ್ರ ರಾಜ್ಯದವರು.
ಘಟನೆ ಹಿನ್ನೆಲೆ ಏನು…?
ಮಾರ್ಚ್ 8ರ ರಾತ್ರಿ 12-30 ಸಮಯದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ ರಸ್ತೆ ಪಕ್ಕದಲ್ಲಿ ಬಿಳಿಯ ಬಣ್ಣದ ಸ್ಕಾರ್ಪಿಯೊ ಕಾರು ನಿಂತಿತ್ತು. ಐವರು ದರೋಡೆ ಮಾಡುವ ಉದ್ದೇಶದಿಂದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ರಿಗೆ ಮಾಹಿತಿ ಬಂದಿತ್ತು.
ಮಾಹಿತಿ ಖಚಿತಪಡಿಸಿಕೊಂಡು ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕರಿಗೆ ಈ ಬಗ್ಗೆ ಎಸ್ಪಿ ಸೂಚನೆ ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಆಜಾದ್ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಶ್ವಿನ್ ಹಾಗೂ ದಾವಣಗೆರೆ ಡಿ.ಸಿ.ಆರ್.ಬಿ ಘಟಕದ ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ ತಂಡವು ಆಜಾದ್ ನಗರ ಠಾಣೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿತು.
ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಒಂದು ಬಿಳಿ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿ 5 ಜನರು ಒಟ್ಟಾಗಿ ಸೇರಿಕೊಂಡು ದರೋಡೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದದ್ದು ಕಂಡು ಬಂತು. ಕೂಡಲೇ ಪೊಲೀಸ್ ತಂಡ ದರೋಡೆ ತಂಡದ ಮೇಲೆ ದಾಳಿ ಮಾಡಿದ್ದು, ದರೋಡೆಗೆ ಹೊಂಚು ಹಾಕಿದ್ದ 5 ಜನರನ್ನು ಹಿಡಿಯಿತು.
ಸ್ಕ್ರಾಪಿಯೋ ಕಾರಿನಲ್ಲಿದ್ದ ಆಯುಧ ಮತ್ತು ವಸ್ತುಗಳನ್ನು ಪರಿಶೀಲಿಸಿದಾಗ ಒಂದು ಶಾಕ್ ಅಬ್ಜರ್ ಪೈಪ್, ಒಂದು ಕಬ್ಬಿಣದ ರಾಡ್, ಒಂದು ಕಬ್ಬಿಣದ ನಲ್ಲಿ ಪೈಪ್, ಒಂದು ಜಾಲರಿ ಕಟ್ಟರ್, ಒಂದು ವೈರ್ ಕಟ್ಟರ್, ಒಂದು ಅಡಿ ಉದ್ದದ ಚಾಕು, ಒಂದು 10 ಇಂಚು ಉದ್ದದ ಚಾಕು, 6 ಸಣ್ಣ ಬ್ಲೇಡ್ ಚಾಕುಗಳು, 3 ಜೊತೆ ಆರು ಹ್ಯಾಂಡ್ ಗ್ಲೌಸ್, ಸುಮಾರು 15 ಅಡಿ ಉದ್ದದ 3 ಹಗ್ಗಗಳು, 5 ಕಪ್ಪು ಬಣ್ಣದ ಮಾಸ್ಕ್, 5 ಕಾರದ ಪುಡಿ ಪಾಕಿಟ್ ಗಳು, ಒಂದು ಗಮ್ ಟೇಪ್, ಒಂದು ಬ್ಯಾಗ್, ಎರಡು MH-42-BJ-5141 ಸಂಖ್ಯೆ ಇರುವ ವಾಹನದ ನಂಬರ್ ಪ್ಲೇಟ್ ಗಳು ಮತ್ತು 16) ಸ್ಕಾರ್ಪಿಯೊ ಕಾರ್ ದೊರೆತಿದೆ.
5 ಜನರು ಒಟ್ಟಾಗಿ ಸೇರಿಕೊಂಡು ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ದರೋಡೆ ಮಾಡುವ ಉದ್ದೇಶದಿಂದ ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಐವರು ಆರೋಪಿತರು ಬೆಂಗಳೂರಿನಿಂದ ಬಂಗಾರದ ವ್ಯಾಪಾರಿಯನ್ನು ಹಿಂಬಾಲಿಸಿ ಬಂದಿದ್ದು, ಬಂಗಾರದ ವ್ಯಾಪಾರಿಯು ಬೆಂಗಳೂರಿನಿಂದ ತೆಗೆದುಕೊಂಡು ಬಂದಿದ್ದ 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ತೆಗೆದುಕೊಂಡು ದಾವಣಗೆರೆಯ ಲಾಡ್ಜ್ ವೊಂದರಲ್ಲಿ ರಾತ್ರಿ ತಂಗಿದ್ದರು. ಇವರನ್ನು ಹಿಂಬಾಲಿಸಿ ಬಂದಿದ್ದ ದರೋಡೆ ತಂಡ ಬಂಗಾರ ವ್ಯಾಪಾರಿಯಲ್ಲಿದ್ದ ಆಭರಣಗಳನ್ನು ದರೋಡೆ ಮಾಡಲು ಲಾಡ್ಜ್ ಬಳಿ ಹೊಂಚು ಹಾಕಿದ್ದು, ಆದರೆ ಇದು ವಿಫಲವಾಗಿದೆ. ನಂತರ ವಾಪಸ್ ಹೋಗಲು ನಿರ್ಧರಿಸಿದ್ದು, ವಾಪಸ್ ಹೋಗಲು ಖರ್ಚಿಗೆ ಹಣಕ್ಕಾಗಿ ದಾವಣಗೆರೆ ನಗರದಲ್ಲಿ ಸಂಚರಿಸಿ ರಾತ್ರಿ ಸಮಯದಲ್ಲಿ ದರೋಡೆ ಮಾಡಲು ಇಲ್ಲಿ ನಿಂತಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ.
ಈ ಆರೋಪಿತರು ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ಈ ದರೋಡೆಕೋರರ ಮುಖ್ಯ ಟಾರ್ಗೆಟ್ ಬಂಗಾರದ ವ್ಯಾಪಾರಿಗಳು ಆಗಿರುವುದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹಾಗೂ ಆರೋಪಿತರಿಂದ ಆಗಬಹುದಾಗಿದ್ದ ದರೋಡೆ ಪ್ರಕರಣವನ್ನು ತಡೆಯುವಲ್ಲಿ ದಾವಣಗೆರೆ ಪೊಲೀಸ್ ತಂಡ ಯಶಸ್ವಿಯಾಗಿದ್ದು, ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಜಿ ಮಂಜುನಾಥ ಅವರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಮನಿ, ಆಜಾದ್ ನಗರ ಪೊಲೀಸ್ ನಿರೀಕ್ಷಕ ಅಶ್ವಿನ್ ಹಾಗೂ ಸಿಬ್ಬಂದಿ ಆಂಜನೇಯ ಕೆ.ಟಿ, ಮಜೀದ್ ಕೆ.ಸಿ, ರಾಘವೇಂದ್ರ, ಬಾಲರಾಜ್, ರಮೇಶ್ ನಾಯ್ಕ, ಆಜಾದ್ ನಗರ ಠಾಣೆಯ ಸಿಬ್ಬಂದಿ ಮಂಜುನಾಥ ನಾಯ್ಕ, ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ನಾಗರಾಜ ಡಿ ಬಿ, ವೆಂಕಟೇಶ, ನಾಗರಾಜ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು ಅವರನ್ನು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.