SUDDIKSHANA KANNADA NEWS/ DAVANAGERE/ DATE:27-02-2024
ದಾವಣಗೆರೆ: ಖಾಲಿ ಡಬ್ಬ ಅಲ್ಲಾಡಿಸಿದ ಬಿಜೆಪಿ ಪಾಲಿಕೆ ಸದಸ್ಯರು.. ದುಡ್ಡು ಹಾಕಿ ಡಬ್ಬ ಅಲ್ಲಾಡಿಸಿದ ಕೈ ಕಾರ್ಪೊರೇಟರ್… ಪ್ಲೀಸ್ ಬೆಂಕಿ ಹಚ್ಬೇಡಿ… ನಾವೇ ಮೇಯರ್ ಆಯ್ಕೆ ಮಾಡ್ತೇವೆ… ಬಹಿರಂಗವಾಗಿ ಹೇಳ್ಬೇಡಿ ಕಿವಿಯಲ್ಲಿ ಹೇಳಿ.. ನಾನು ಚಮಚಗಿರಿ ಮಾಡಿಲ್ಲ, ಮಾಡೋದು ಇಲ್ಲ.. ಕೈನತ್ತ ಸುಳಿಯುವುದೂ ಇಲ್ಲವೆಂದ ಬಿಜೆಪಿ ಸದಸ್ಯ… ಗಲಾಟೆ ಮಾಡಿದರೆ 100 ನಾಯಿಗಳ ಕೊಟ್ಬಿಡಿ.. ಮನುಷ್ಯ ಇಷ್ಟಪಟ್ಟರೆ ಆಗಲ್ಲ, ದೇವರು ಇಷ್ಟಪಡಬೇಕು…
ಮಹಾನಗರ ಪಾಲಿಕೆಯಲ್ಲಿ ನಡೆದ ಆಯವ್ಯಯ 2024-25 ನೇ ಸಾಲಿನ ಸಭೆಯಲ್ಲಿ ಕಂಡು ಬಂದ ಕೆಲ ಸ್ವಾರಸ್ಯಕರ ಅಂಶಗಳು. ಬಜೆಟ್ ಮಂಡನೆ ಆಗ್ತಿದ್ದಂತೆ ವಿಪಕ್ಷ ನಾಯಕ ಪ್ರಸನ್ನಕುಮಾರ್ ಸೇರಿದಂತೆ ಹಲವರು ಖಾಲಿ ಡಬ್ಬ
ಪ್ರದರ್ಶಿಸಿದರು. ಈ ಹಿಂದೆ ಕೈ ಸದಸ್ಯರು ಕಿವಿಗೆ ಹೂ ಇಟ್ಟುಕೊಂಡು ಬಂದಿದ್ದರು. ಆದ್ರೆ, ಬಿಜೆಪಿಯವರು ಖಾಲಿ ಡಬ್ಬ ಪ್ರದರ್ಶಿಸಿ ತಿರುಗೇಟು ನೀಡಿದ್ದು ಗಮನ ಸೆಳೆಯಿತು. ಈ ವಿಚಾರವಾಗಿ ಕೆಲಹೊತ್ತು ಬಿಸಿ ಬಿಸಿ ಚರ್ಚೆಯೂ ನಡೆಯಿತು.
ಬೆಂಕಿ ಹಚ್ಬೇಡಿ:
ಬಿಜೆಪಿ ಪಾಲಿಕೆ ಸದಸ್ಯ ಶಿವಾನಂದ್ ಮಾತನಾಡಿ, ಯಾರನ್ನೋ ಮೆಚ್ಚಿಸುವ ಸಲುವಾಗಿ, ಮೇಯರ್ ಆಗುವುದಕ್ಕಾಗಿ ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೈ ಹಿರಿಯ ಸದಸ್ಯ ಕೆ. ಚಮನ್ ಸಾಬ್
ಅವರು ಹಣೆಬರಹ ಇದ್ದವರು ಮೇಯರ್ ಆಗ್ತಾರೆ. ಈ ಹಿಂದೆ ಯಾರ್ಯಾರೋ ಆಗಿ ಹೋಗಿದ್ದಾರೆ. ನಾನು ಚಮಚಗಿರಿ ಮಾಡಲು ಹೋಗಲ್ಲ. ಅದೃಷ್ಟ ಇದ್ದವರಿಗೆ ಅವಕಾಶ ಬರುತ್ತದೆ. ಯಾರನ್ನೂ ತೃಪ್ತಿಪಡಿಸುವ ಮನುಷ್ಯ ಅಲ್ಲ. ಮನುಷ್ಯ ಇಷ್ಟಪಟ್ಟರೆ ಆಗಲ್ಲ, ದೇವರು ಇಷ್ಟಪಡಬೇಕು ಎಂದ್ರು.
ಎಸ್. ಟಿ. ವೀರೇಶ್ ಅವರು ಮಾತನಾಡಿ, ಇನ್ನು ಕೆಲವೇ ದಿನಗಳಲ್ಲಿ ಹೊಸ ಮೇಯರ್ ಬರುತ್ತಾರೆ. ನೀವು ತುಂಬಾ ಹಿರಿಯರಿದ್ದೀರಾ. ನಿಮಗೆ ಅವಕಾಶ ಬರಲಿ. ಇದು ನಮ್ಮ ಆಸೆ. ನಾವಂದುಕೊಂಡವರೇ ಮೇಯರ್ ಆಗ್ತಾರೆ. ಕಳೆದ ನಾಲ್ಕು ವರ್ಷವೂ ನಾವು ಅಂದುಕೊಂಡವರೇ ಮೇಯರ್ ಆಗಿದ್ದಾರೆ. ಈಗ ನಿಮಗೆ ಸಂಪೂರ್ಣ ಬಹುಮತ ಇದೆ. ಆದ್ರೂ ನಾವಂದುಕೊಂಡವರೇ ಮುಂದೆಯೂ ಮೇಯರ್ ಆಗುತ್ತಾರೆ ಎಂದು ಕೈ ಸದಸ್ಯರ ಕಾಲೆಳೆದರು.
ಈ ವೇಳೆ ಮಾತನಾಡಿದ ಪಾಮೇನಹಳ್ಳಿ ನಾಗರಾಜ್ ಅವರು, ಪ್ಲೀಸ್ ನೀವು ಬೆಂಕಿ ಹಚ್ಚಲು ಹೋಗ್ಬೇಡಿ. ನಾವೇ ಆಯ್ಕೆ ಮಾಡುತ್ತೇವೆ ಎಂದ್ರು. ಈ ವೇಳೆ ಅಬ್ದುಲ್ ಲತೀಫ್ ಅವರು ಚಮನ್ ಸಾಬ್ ಮೇಯರ್ ಆಗುವುದಾದರೆ ಬಿಜೆಪಿಯ ಒಂದು
ಮತ ಬಂತು. ಆ ಕಡೆ ಯಾಕೆ ಕುಳಿತಿದ್ದೀರಾ. ಈ ಕಡೆ ಬನ್ನಿ ಎಂದ್ರು. ಇದಕ್ಕೆ ಸಿಡಿಮಿಡಿಗೊಂಡ ಶಿವಾನಂದ್, ಕಾಂಗ್ರೆಸ್ ಕಡೆ ಬರುವುದಿರಲಿ, ಸುಳಿಯುವುದೂ ಇಲ್ಲ. ನಾನು ಪಕ್ಕಾ ಬಿಜೆಪಿಗ ಎಂದ್ರು. ಆಗ ಅಲ್ರೀ ನೀವು ಕಿವಿ ಬಳಿ ಬಂದು ಹೇಳಬೇಕು.
ಅದನ್ನು ಬಿಟ್ಟು ಬಹಿರಂಗವಾಗಿ ಹೇಳ್ತೀರಲ್ವಾ ಎನ್ನುತ್ತಿದ್ದಂತೆ ಮೇಯರ್, ಆಯುಕ್ತೆ, ಸ್ಥಾಯಿ ಸಮಿತಿ ಅಧ್ಯಕ್ಷರು ಬಿದ್ದು ಬಿದ್ದು ನಕ್ಕರು.
100 ನಾಯಿ ಕೊಟ್ಬಿಡಿ…!
ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ಈ ಹಿಂದೆ 7500 ಬಿಡಾಡಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮುಂದಿನ ವರ್ಷವೂ ಸಹ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಉದ್ದೇಶಿಸಲಾಗಿದೆ. ಇದು ಸಂತಸದ ವಿಚಾರ. ಆದ್ರೆ, ನಾಯಿಗಳ ವಿಚಾರಕ್ಕೆ ಗಲಾಟೆ ಮಾಡುವವರಿಗೆ 100 ನಾಯಿಗಳ ಕೊಟ್ಬಿಡಿ. ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರ ಮೇಲೆ ದಾಳಿ ನಡೆಸುತ್ತಿರುವ ನಾಯಿಗಳ ಉಪಟಳ ಜಾಸ್ತಿಯಾಗಿದೆ. ಹಾಗಾಗಿ, ಈ ಬಗ್ಗೆ ಕಠಿಣ ಕ್ರಮ ಆಗಬೇಕು. ಸಂತಾನಹರಣ ಚಿಕಿತ್ಸೆ ಮಾಡಿ ತಂದು ಬಿಟ್ಟರೆ ಪ್ರಯೋಜನ ಇಲ್ಲ. ಶ್ವಾನ ಶಾಲೆ ಮಾಡಿ ಎಂದು ಚಮನ್ ಸಾಬ್ ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯರಿಗೆ 1 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಬಿಜೆಪಿಯವರಿಗೆ ನೀಡದೇ ತಾರತಮ್ಯ ಎಸಗಲಾಗಿದೆ ಎಂದು ಪ್ರಸನ್ನಕುಮಾರ್ ಆರೋಪಿಸುತ್ತಿದ್ದಂತೆ ರೊಚ್ಚಿಗೆದ್ದ ಕಾಂಗ್ರೆಸ್ ನ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಪಾಮೇನಹಳ್ಳಿ ನಾಗರಾಜ್ ಅವರು ಈ ಹಿಂದೆ ಬಿಜೆಪಿ ಆಡಳಿತಲ್ಲಿದ್ದಾಗ ಕಾಂಗ್ರೆಸ್ ಸದಸ್ಯರಿಗೆ ಎಲ್ಲಿ ಅನುದಾನ ನೀಡಿದ್ದೀರಾ? ನಿಮ್ಮ ಸದಸ್ಯರಿಗೆ ಕೊಟ್ಟಿದ್ದೀರಾ. ಈಗ ಮಾತನಾಡುತ್ತೀರಾ ಎಂದು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ಎಸ್. ಟಿ. ವೀರೇಶ್, ಪ್ರಸನ್ನಕುಮಾರ್ ಅವರು ಈ ಬಗ್ಗೆ ಚರ್ಚೆಯಾಗಲಿ ಎಂದರು. ಬಜೆಟ್ ಬಗ್ಗೆ ಚರ್ಚಿಸೋಣ. ಬೇಕಿದ್ದರೆ ನಾಳೆ ಈ ಬಗ್ಗೆ ಮತ್ತೆ ಚರ್ಚಿಸೋಣ ಎಂದರು. ಒಟ್ಟಿನಲ್ಲಿ ಪಾಲಿಕೆಯಲ್ಲಿ ಖಾಲಿ ಡಬ್ಬ ಹೇಗೆ ಬಂದ್ವು ಎಂಬುದೇ ಆಡಳಿತ ಪಕ್ಷದ ಸದಸ್ಯರಿಗೆ ಗೊತ್ತಾಗದೇ ಇದ್ದದ್ದು ಸಭೆಯಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಯ್ತು.