ಜಾಮ್‌ನಗರ್: ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ, ಬಳಿಕ ಅಪಹರಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದ ದರೋಡೆಕೋರರ ಗ್ಯಾಂಗ್ ಒಂದನ್ನು ಗುಜರಾತ್‌ನ ಜಾಮ್‌ನಗರ್ ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಮನ್‌ನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ ಹೇಗೆ ನಡೆಯುತ್ತಿತ್ತು?:
ಪೂಜಾ ಪರ್ಮಾರ್ ಎಂಬ ಮಹಿಳಾ ಆರೋಪಿ ಇನ್‌ಸ್ಟಾಗ್ರಾಮ್‌ನಲ್ಲಿ ಯುವಕರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ಬಳಿಕ ಅವರನ್ನು ನಿರ್ಜನ ಪ್ರದೇಶಕ್ಕೆ ಭೇಟಿಯಾಗಲು ಕರೆಯುತ್ತಿದ್ದಳು. ಯುವಕರು ಅಲ್ಲಿಗೆ ಬರುತ್ತಿದ್ದಂತೆ ಕಾರಿನಲ್ಲಿ ಬರುತ್ತಿದ್ದ ಇತರೆ ಗ್ಯಾಂಗ್ ಸದಸ್ಯರು ಯುವಕನನ್ನು ಅಪಹರಿಸುತ್ತಿದ್ದರು.
ನಂತರ ಯುವಕರನ್ನು ಅಶ್ಲೀಲ ಸ್ಥಿತಿಯಲ್ಲಿ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಕುಟುಂಬದವರಿಗೆ ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣಗಳನ್ನು ದೋಚುತ್ತಿದ್ದರು. ಇತ್ತೀಚೆಗೆ ಜಾಮ್‌ನಗರ್‌ನ ಯುವಕನೊಬ್ಬನನ್ನು ಚಾಕು ತೋರಿಸಿ ಬೆದರಿಸಿ, ನಗದು ಹಾಗೂ ಬೆಳ್ಳಿ ಸರವನ್ನು ಸುಲಿಗೆ ಮಾಡಿದ್ದಾಗ ಪೊಲೀಸರಿಗೆ ದೂರು ಸಂದಿತ್ತು.
ಹಲವು ವರ್ಷಗಳಿಂದ ಸಕ್ರಿಯ:
ಪೊಲೀಸ್ ತನಿಖೆಯ ವೇಳೆ ಈ ಗ್ಯಾಂಗ್ ಕಳೆದ ಎರಡೂವರೆ ವರ್ಷಗಳಿಂದ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.
ರಾಜ್‌ಕೋಟ್‌ನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 10 ಲಕ್ಷ ರೂ. ಸುಲಿಗೆ ಮಾಡಲಾಗಿತ್ತು. ಅಷ್ಟೇ ಅಲ್ಲದೆ, ಕಿವುಡ ಮತ್ತು ಮೂಕ ವ್ಯಕ್ತಿಯೊಬ್ಬರನ್ನು ಟಾರ್ಗೆಟ್ ಮಾಡಿ ಹಣ ಪೀಕಲಾಗಿತ್ತು ಹಾಗೂ ನಕಲಿ ಮದುವೆ ದಂಧೆಯನ್ನೂ ಈ ಗ್ಯಾಂಗ್ ನಡೆಸಿರುವುದು ಬಯಲಾಗಿದೆ. ಸದ್ಯ ಪೊಲೀಸರು ಐವರನ್ನು ಬಂಧಿಸಿದ್ದು, ಇವರ ಜಾಲದಲ್ಲಿ ಇನ್ನೂ ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.





Leave a comment