ನವದೆಹಲಿ: ಚಿನ್ನದ ಬೆಲೆ 10 ಗ್ರಾಂಗೆ 1.60 ಲಕ್ಷ ರೂ. ಗಳ ಸನಿಹದಲ್ಲಿದೆ ಹಾಗೂ ಬೆಳ್ಳಿ ಬೆಲೆ ಕೆಜಿಗೆ 2.4 ಲಕ್ಷ ರೂ. ಗಡಿ ದಾಟಿದೆ. ಬೆಲೆಬಾಳುವ ಲೋಹಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಹೂಡಿಕೆದಾರರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳು ಅಮೆರಿಕದ ಟ್ರೆಷರಿ ಇಳುವರಿ ಕಡಿಮೆಯಾಗಿರುವುದು ಮತ್ತು ಜಾಗತಿಕ ಈಕ್ವಿಟಿ ಮಾರುಕಟ್ಟೆ ಚೇತರಿಕೆಯು ಚಿನ್ನ-ಬೆಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಯುಎಸ್-ಇರಾನ್ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ (Safe-haven asset) ಚಿನ್ನದ ಮೊರೆ ಹೋಗುತ್ತಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಸ್ಥಿತಿಗತಿ
ಚಿನ್ನದ ದರ: ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರಸ್ತುತ 1,58,284 ರೂ. ಆಸುಪಾಸಿನಲ್ಲಿದೆ. ಚಿನ್ನವು 1,58,600 ರೂ. ಗಡಿ ದಾಟಿದರೆ ಶೀಘ್ರದಲ್ಲೇ 1.60 ಲಕ್ಷದಿಂದ 1.62 ಲಕ್ಷ ರೂ. ತಲುಪುವ ಸಾಧ್ಯತೆಯಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ‘ಓವರ್‌ಬಾಟ್’ (Overbought) ಸ್ಥಿತಿಯಲ್ಲಿರುವುದರಿಂದ ಸಣ್ಣ ಮಟ್ಟದ ತಿದ್ದುಪಡಿ (Correction) ಆಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಬೆಳ್ಳಿ ದರ: ಬೆಳ್ಳಿ ಬೆಲೆ 2,40,108 ರೂ. ದಾಟಿ ವಹಿವಾಟು ನಡೆಸುತ್ತಿದೆ. 2,41,000 ರೂ. ಪ್ರತಿರೋಧವನ್ನು (Resistance) ದಾಟಿದರೆ ಶೀಘ್ರದಲ್ಲೇ 2.45 ಲಕ್ಷದಿಂದ 2.50 ಲಕ್ಷ ರೂ. ತಲುಪಬಹುದು ಎಂದು ಮಾರುಕಟ್ಟೆ ತಜ್ಞರಾದ ಪೊನ್ಮುಡಿ ಆರ್. ವಿಶ್ಲೇಷಿಸಿದ್ದಾರೆ.
ಹೂಡಿಕೆದಾರರು ಈಗೇನು ಮಾಡಬೇಕು?
ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಹೂಡಿಕೆದಾರರು ಆತುರಪಟ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ:
ಹೊಸ ಹೂಡಿಕೆದಾರರಿಗೆ: ಒಂದೇ ಬಾರಿಗೆ ದೊಡ್ಡ ಮೊತ್ತದ ಬಂಡವಾಳ ಹೂಡುವ ಬದಲು, ಹಂತ-ಹಂತವಾಗಿ (Staggered buying) ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತ.
ಹಾಲಿ ಹೂಡಿಕೆದಾರರಿಗೆ: ಈಗಿರುವ ಹೂಡಿಕೆಯನ್ನು ಮುಂದುವರಿಸಿ, ಮಾರುಕಟ್ಟೆಯ ಪ್ರಮುಖ ಬೆಂಬಲ ಮಟ್ಟಗಳ (Support levels) ಮೇಲೆ ನಿಗಾ ಇಡಬೇಕು.
ದೀರ್ಘಾವಧಿ ಹೂಡಿಕೆ: ಅಲ್ಪಾವಧಿಯ ಬೆಲೆ ಏರಿಳಿತಗಳನ್ನು ಊಹಿಸಲು ಪ್ರಯತ್ನಿಸುವ ಬದಲು, ನಿಮ್ಮ ವೈಯಕ್ತಿಕ ಹಣಕಾಸು ಗುರಿಗಳು ಮತ್ತು ಅಪಾಯವನ್ನು ಎದುರಿಸುವ ಸಾಮರ್ಥ್ಯದ ಆಧಾರದ ಮೇಲೆ ದೀರ್ಘಾವಧಿಯ ಹೂಡಿಕೆಗೆ ಆದ್ಯತೆ ನೀಡುವುದು ಸೂಕ್ತ.





Leave a comment