SUDDIKSHANA KANNADA NEWS/ DAVANAGERE/ DATE:16-02-2024
ದಾವಣಗೆರೆ: ಅಸಮಾನತೆ ಸಾರುವ ಮತ್ತು ಒಂದು ವರ್ಗದವರ ಓಲೈಕೆಗಾಗಿಯೇ ಬಜೆಟ್ ಮಂಡನೆ ಮಾಡಲಾಗಿದೆ. ಯಾವುದೇ ದೂರದೃಷ್ಟಿಯಿಲ್ಲದ, ನಿರಾಸಾದಾಯಕ ಬಜೆಟ್ ಇದಾಗಿದೆ ಎಂದು ದಾವಣಗೆರೆ ಬಿಜೆಪಿ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ. ರವಿಕುಮಾರ್ ಟಿ. ಜಿ. ಪ್ರತಿಕ್ರಿಯೆ ನೀಡಿದ್ದಾರೆ.
ಸರ್ವ ಜನಾಂಗಕ್ಕೂ ಸಮಾನವಾದ ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ಸರಕಾರಗಳು ಕಾರ್ಯ ನಿರ್ವಹಿಸಬೇಕು. ಆದರೆ, ಕಾಂಗ್ರೆಸ್ ಸರಕಾರ ಮಂಡಿಸಿದ ಬಜೆಟ್ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದೆ. ಯುವಕರಿಗೆ ಯಾವುದೇ ಕಾರ್ಯಕ್ರಮ, ಯೋಜನೆಗಳನ್ನು ಘೋಷಿಸದೇ, ಅಭಿವೃದ್ಧಿಯಲ್ಲಿ ರಾಜ್ಯವನ್ನು ದಶಕಗಳಷ್ಟು ಹಿಂದಕ್ಕೆ ತಳ್ಳುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದಷ್ಟೂ ಹಣ ನೀಡದೆಯೇ, ಬರಗಾಲದಿಂದ ನೊಂದು ತೀವ್ರ ಸಂಕಷ್ಟದಲ್ಲಿರುವ ರೈತರನ್ನು ನಿರ್ಲಕ್ಷಿಸಿ, ಬಡವರು, ದೀನದಲಿತರು, ನೇಕಾರರು, ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳಿಗೂ ನಿರಾಸೆ ಮೂಡಿಸಲಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪ್ರಗತಿ ಶೂನ್ಯ ಬಜೆಟ್ ಎಂದರೆ ತಪ್ಪಾಗದು ಎಂದು ರವಿಕುಮಾರ್ ಅಭಿಪ್ರಾಯಪಟ್ಟಿದ್ದಾರೆ.