SUDDIKSHANA KANNADA NEWS/ DAVANAGERE/ DATE:21-02-2024
ದಾವಣಗೆರೆ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿ ಬರುವ ಸಿಆರ್ ಸಿ ಕೇಂದ್ರವನ್ನು ದಾವಣಗೆರೆಯಲ್ಲಿ 2017 ರಲ್ಲಿ ಪ್ರಾರಂಭಿಸಲಾಯಿತು. ಈ ಕೇಂದ್ರವನ್ನು ದಾವಣಗೆರೆಗೆ ತರಲು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಈ ಕೇಂದ್ರವನ್ನು ದಾವಣಗೆರೆಗೆ ಮಂಜೂರು ಮಾಡಿಸಿದಾಗ ಕೆಲವರು ಹುಚ್ಚಾಸ್ಪತ್ರೆ ತಂದಿದ್ದಾರೆ ಎಂದು ಕುಹಕವಾಡಿದ್ದರು. ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಂಡಿರಲಿಲ್ಲ. ಇಂತಹ ಮಕ್ಕಳ ಕೆಲಸವನ್ನು ನಾನು ಅತ್ಯಂತ ಸಂತೃಪ್ತಿಯಿಂದ ಮಾಡ್ತಾ ಇದೀನಿ ಎಂದು ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಹೇಳಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವತಿಯಿಂದ ದಿವ್ಯಾಂಗರ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ದಾವಣಗೆರೆ ನಗರದ ವೊಡ್ಡಿನಹಳ್ಳಿ ಬಳಿ ಸಂಯುಕ್ತ ಪ್ರಾದೇಶಿಕ ಚಿಕಿತ್ಸಾ ಕೇಂದ್ರದ ಉದ್ಘಾಟನಾ
ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕೇಂದ್ರ ತಾತ್ಕಾಲಿಕವಾಗಿ ದೇವರಾಜ್ ಅರಸ್ ಬಡಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರಕ್ಕೆ ವಡ್ಡಿನಹಳ್ಳಿ 9 ಎಕರೆ ಹಾಗೂ ಕೊಗ್ಗನೂರು ಬಳಿ 7,23 ಎಕರೆ ಒಟ್ಟು 16.23 ಎಕರೆ ಜಮೀನನ್ನು ಮಂಜೂರು ಮಾಡಿಸಲಾಗಿದೆ. ಇಲ್ಲಿ ಬುದ್ದಿಮಾಂದ್ಯರಿಗೆ ಚಿಕಿತ್ಸೆ, ತರಬೇತಿ ಮತ್ತು ಪುನರ್ವಸತಿಯನ್ನು ಕಲ್ಪಿಸಲಾಗುತ್ತದೆ. ಇಲ್ಲಿಯವರೆಗೆ ಸುಮಾರು 5881 ವಿಕಲಾಂಗ ವ್ಯಕ್ತಿಗಳು 33,368 ಬಾರಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಸೇವೆಯನ್ನು ಪಡೆದುಕೊಂಡಿದ್ದಾರೆ ಎಂದು
ಮಾಹಿತಿ ನೀಡಿದರು.
4169 ವಿಕಲಾಂಗರು ಟಿಎಲ್‌ಎಮ್ ಕಿಟ್ ಸೇರಿದಂತೆ ವಿವಿಧ ಸಾಧನಾ ಸಲಕರಣೆಗಳನ್ನು ಪಡೆದುಕೊಂಡಿದ್ದಾರೆ. 699 ದೈಹಿಕ ವಿಕಲಾಂಗರಿಗೆ ವೀಲ್ ಚೇರ್, 645 ವಿಕಲಾಂಗರಿಗೆ ಶ್ರವಣ ಸಾಧನಗಳನ್ನು ವಿತರಣೆ ಮಾಡಲಾಗಿದೆ. 2023 ರ ಕೊನೆಯವರೆಗೆ 53,625 ವಿಕಲಾಂಗರಿಗೆ ಹಾಗೂ ಅವರ ಪೋಷಕರಿಗೆ, ಆರೈಕೆದಾರರಿಗೆ 463 ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 2019 ರಿಂದ ದಾವಣಗೆರೆ ಸಿ.ಆರ್.ಸಿ. 2 ಡಿಪ್ಲೊಮೋ ಕೋರ್ಸುಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಸುಮಾರು 18 ಸಾವಿರ ಚದುರ ಅಡಿ ವಿಸ್ತೀರ್ಣದ ಈ ನೂತನ ಕಟ್ಟಡದಲ್ಲಿ 45 ಕೊಠಡಿಗಳಿವೆ . ಕಳೆದ ಒಂದು ವರ್ಷದ ಹಿಂದೆ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದರು.
ಕ್ರೀಡಾ ಸಮುಚ್ಛಯ ನಿರ್ಮಾಣದ ಉದ್ದೇಶ:
ದಾವಣಗೆರೆಯಲ್ಲಿಯೂ ಕೂಡ ಇಲ್ಲಿ ಬಾಕಿ ಉಳಿದಿರುವ ಜಾಗ ಬಳಸಿಕೊಂಡು ಹಾಗೂ ಕೊಗ್ಗನೂರು ಬಳಿಯಿರುವ 7.23 ಎಕರೆ ಜಾಗದಲ್ಲಿ ದಿವ್ಯಾಂಗ ಜನರಿಗೆ MATP -Sports Complex ( Motor Activity Therapy Complex ) ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡುವ ಉದ್ದೇಶವನ್ನು ನಾನು ಹೊಂದಿದ್ದೇನೆ. ಈಗಾಗಲೇ ಈ ಕುರಿತು ಸಚಿವರ ಗಮನ ಸೆಳೆದಿದ್ದೇನೆ. ಈ ಸೌಲಭ್ಯ ದೇಶದ ಯಾವುದೇ ಸಿಆರ್‌ಸಿ ಕೇಂದ್ರಗಳಲ್ಲಿ ಇಲ್ಲ. ವಿಶೇಷ ಓಲಂಪಿಕ್ ಹಾಗೂ ಪ್ಯಾರ ಓಲಂಪಿಕ್ ನಲ್ಲಿ ಭಾಗವಹಿಸುವ ದಿವ್ಯಾಂಗ ಅಥ್ಲೆಟಿಕ್‌ಗಳಿಗೆ ಇಲ್ಲಿ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ . ಅದೇ ರೀತಿ Multiple Therapeutic Swimming pool ( ಬಹು ಚಿಕಿತ್ಸಕ ಈಜುಕೊಳ ) ಹಾಗೂ ದಿವ್ಯಾಂಗ ಜನರು ಬಳಸುವ ಸಹಾಯಕ ಸಾಧನಗಳ ಉತ್ಪಾದನಾ ಘಟಕವನ್ನು ಇಲ್ಲಿ ಸ್ಥಾಪನೆ ಮಾಡುವ ಉದ್ದೇಶವಿದೆ ಎಂದರು.
ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡ 15 ರಷ್ಟು ಜನ ವಿಕಲಾಂಗ ವ್ಯಕ್ತಿಗಳಾಗಿದ್ದಾರೆ . ಭಾರತದಲ್ಲಿ ಸುಮಾರು 2.68 ಕೋಟಿ ಜನ ವಿಕಲಾಂಗರಿದ್ದಾರೆ ಎನ್ನುವ ಅಂದಾಜಿದೆ. ಪ್ರಧಾನಿ ನರೇಂದ್ರ ಮೋದಿಜಿಯವರು ಅವರ ಮನ್ ಕಿ ಕಾರ್ಯಕ್ರಮದಲ್ಲಿ
ವಿಕಲಾಂಗರನ್ನು “ ದಿವ್ಯಾಂಗಜನ ” ಎಂದು ಕರೆಯುವ ಮೂಲಕ ದಿವ್ಯಾಂಗ ಜನರ ಬಗ್ಗೆ ಅವರ ವಿಶೇಷ ಕಾಳಜಿಯನ್ನು ತೋರಿಸಿದರು. ದಿವ್ಯಾಂಗರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ದಿವ್ಯಾಂಗಜನರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆ 2016 ರನ್ನು ಅನುಷ್ಟಾನಕ್ಕೆ ತರುವ ಮೂಲಕ ಕೇಂದ್ರ ಸರ್ಕಾರ ಬದ್ಧತೆಯನ್ನು ತೋರಿದೆ. ಈ ಕಾಯ್ದೆಯನ್ವಯ ವಿವಿಧ ಅಂಗವೈಕಲ್ಯಗಳ ವರ್ಗಗಳನ್ನು 7 ರಿಂದ 21 ಕ್ಕೆ ವಿಸ್ತರಣೆ ಮಾಡಲಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿ ದಿವ್ಯಾಂಗ ಜನರಿಗೆ ಮೀಸಲಾತಿಯನ್ನು ಶೇಕಡ 3 ರಿಂದ 4 ಕ್ಕೆ ಏರಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ಶೇಕಡ 3 ರಿಂದ 5 ಕ್ಕೇರಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಸುಗಮ್ಯ ಭಾರತ ಅಭಿಯಾನದಡಿ ದಿವ್ಯಾಂಗ ಜನರು ಸರ್ಕಾರಿ ಕಛೇರಿಗಳಲ್ಲಿ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಸರಳವಾಗಿ ಪ್ರವೇಶ ಪಡೆಯುವ ಉದ್ದೇಶದೊಂದಿಗೆ ಸುಧಾರಣೆ ತರಲಾಗಿದೆ. 1,100 ಕೇಂದ್ರ ಸರ್ಕಾರದ ಕಟ್ಟಡಗಳು ಹಾಗೂ 611 ರಾಜ್ಯ ಸರ್ಕಾರದ ಕಟ್ಟಡಗಳನ್ನು ದಿವ್ಯಾಂಗ ಜನರ ಪ್ರವೇಶಕ್ಕಾಗಿ ಮರುಹೊಂದಾಣಿಕೆ ಮಾಡಿ ನಿರ್ಮಾಣ ಮಾಡಲಾಗಿದೆ. ದೀನ್ ದಯಾಳ್ ಅಂಗವಿಕಲರ ಪುನರ್ವಸತಿ ಯೋಜನೆಯು ( Deen Dayal Disabled Rehabilitation Scheme ( DDRS ) ದಿವ್ಯಾಂಗ ಜನರ ಪುನರ್ವಸತಿಗೆ ಮೀಸಲಾದ ಯೋಜನೆಗಳಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಸಹಾಯಧನವನ್ನು ನೀಡುತ್ತದೆ ಎಂದರು.
ಈ ಯೋಜನೆಯಡಿ 2.73 ಲಕ್ಷಕ್ಕೂ ಹೆಚ್ಚು ದಿವ್ಯಾಂಗಜನರು ಧನಸಹಾಯ ಪಡೆದಿದ್ದಾರೆ . ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂಗವೈಕಲ್ಯ ಹೊಂದಿರುವ 52 ಲಕ್ಷ ದಿವ್ಯಾಂಗ
ಜನರಿಗೆ ವಿವಿಧ ಉಪಕರಣ ಸಾಧನಗಳನ್ನು ವಿತರಣೆ ಮಾಡಲಾಗಿದೆ. ಅಸ್ಸಾಂ ನಲ್ಲಿ ದಿವ್ಯಾಂಗ ಜನರ ಅಧ್ಯಯನ ಹಾಗೂ ಪುನರ್ವಸತಿ ವಿಜ್ಞಾನಗಳ ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಲು ಸರ್ಕಾರ ಉದ್ದೇಶ ಹೊಂದಿದೆ. ಮಧ್ಯಪ್ರದೇಶದ ಗ್ವಾಲಿಯನಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಹೆಸರಿನಲ್ಲಿ ದಿವ್ಯಾಂಗ ಜನರಿಗೆ ಹೈಟೆಕ್ ಕ್ರೀಡಾತರಬೇತಿ ಸಮುಚ್ಚಯವನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
2 ನೇ ಹಂತದಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸುಗಳನ್ನು ಮಾಡುವ ವಿದ್ಯಾರ್ಥಿಗಳು ಮತ್ತು ವಿಕಲಚೇತನರ ವಸತಿಗೆ ಅನುವು ಮಾಡಿಕೊಡಲು 100 ಹಾಸಿಗೆಗಳ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿಕೊಡಲಾಗುವುದು ಎಂದು ವಿವರಿಸಿದರು.