ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆ ಸಂಸ್ಥೆಯ ಪೋವಾಯಿ ಕ್ಯಾಂಪಸ್‌ನ ಹಾಸ್ಟೆಲ್‌ನಲ್ಲಿ ದ್ವಿತೀಯ ವರ್ಷದ ಬಿ.ಟೆಕ್ (ಎನರ್ಜಿ ಸೈನ್ಸ್) ವಿದ್ಯಾರ್ಥಿ ಸಾಹಿಲ್ ವಾಕೋಡೆ (22) ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಭೀಕರ ಘಟನೆಯ ಬೆನ್ನಲ್ಲೇ ಸಾಹಿಲ್ ಅವರ ತಂದೆ ರವೀಂದ್ರ ವಾಕೋಡೆ ನೀಡಿದ ಹೇಳಿಕೆಯು ಜಾತಿ ತಾರತಮ್ಯ ಮತ್ತು ಸಂಸ್ಥೆಗಳಲ್ಲಿನ ಮಾನಸಿಕ ಒತ್ತಡದ ಮೇಲಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
“ನನ್ನ ಮಗ ಈ ಹಿಂದೆಯೂ ಸಂಸ್ಥೆಯಲ್ಲಿ ನಡೆಯುತ್ತಿದ್ದ ಜಾತಿ ತಾರತಮ್ಯದ ಬಗ್ಗೆ ನಮಗೆ ತಿಳಿಸಿದ್ದ. ಆದರೆ, ಐಐಟಿಯಲ್ಲಿ ಪ್ರವೇಶ ಸಿಗುವುದು ತುಂಬಾ ಕಷ್ಟ, ಹೀಗಾಗಿ ಎಲ್ಲವನ್ನೂ ಸಹಿಸಿಕೊಂಡು ಮುನ್ನಡೆ ಎಂದು ನಾನೇ ಅವನಿಗೆ ಹೇಳಿದ್ದೆ” ಎಂದು ತಂದೆ ರವೀಂದ್ರ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ ಹಾಗೂ ಆರೋಪಗಳು:
ಸಾಹಿಲ್ ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಫೋನ್ ಬಳಸಿ ಚಾಟ್‌ಜಿಪಿಟಿ (ChatGPT) ಮೂಲಕ ಉತ್ತರ ಹುಡುಕಲು ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಎಂದು ಐಐಟಿ ಆಡಳಿತ ಮಂಡಳಿ ತಿಳಿಸಿತ್ತು. ಈ ವೇಳೆ ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಅವರು ಮೇಲ್ವಿಚಾರಕರಾಗಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸಾಹಿಲ್ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ.
ಆದರೆ, ಸಾಹಿಲ್ ಪೋಷಕರು ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳು ಇದನ್ನು ನಿರಾಕರಿಸಿದ್ದು, ಪ್ರೊಫೆಸರ್ ದೂಲ್ಲಾ ಅವರು ಸಾಹಿಲ್ ಕೆಳಜಾತಿಗೆ ಸೇರಿದವನೆಂಬ ಕಾರಣಕ್ಕೆ ಆತನ ವಿರುದ್ಧ ಜಾತಿ ನಿಂದನೆ ಮಾಡಿದ್ದರು ಮತ್ತು ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ. ಸಾಹಿಲ್ ಅವರ ತಾಯಿ ಸೋನಾಲಿ ವಾಕೋಡೆ, “ನಾವು ಪೋಷಕರಾಗಿ ಮಗನಿಗೆ ಧೈರ್ಯ ತುಂಬಿದೆವು, ಅದು ತಪ್ಪೇ?” ಎಂದು ಪ್ರಶ್ನಿಸಿ ಪ್ರೊಫೆಸರ್ ದೂಲ್ಲಾ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸ್ ಕ್ರಮ ಮತ್ತು ತನಿಖೆ:
ಸಂತ್ರಸ್ತ ಕುಟುಂಬದ ದೂರಿನನ್ವಯ ಪೋವಾಯಿ ಪೊಲೀಸರು ಪ್ರೊಫೆಸರ್ ಸೂರ್ಯನಾರಾಯಣ ದೂಲ್ಲಾ ಸೇರಿದಂತೆ ಇತರ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (SC/ST) ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಮುಂಬೈ ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ.
ಇನ್ನೊಂದೆಡೆ, ಸಾಹಿಲ್ ಕುಟುಂಬದವರು ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸಿಬಿಐ (CBI) ತನಿಖೆಗೆ ಒತ್ತಾಯಿಸಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯು ಜಾತಿ ತಾರತಮ್ಯದ ಆರೋಪಗಳನ್ನು ಅಲ್ಲಗೆಳೆದಿದ್ದು, ಪ್ರೊಫೆಸರ್ ದೂಲ್ಲಾ ಅವರನ್ನು ಡೀನ್ (ಆಡಳಿತಾತ್ಮಕ ವ್ಯವಹಾರಗಳು) ಹುದ್ದೆಯಿಂದ ತೆರವುಗೊಳಿಸಿದೆ.
ಗಮನಾರ್ಹವೆಂದರೆ, ಕಳೆದ ಏಳು ತಿಂಗಳಲ್ಲಿ ಐಐಟಿ ಬಾಂಬೆಯಲ್ಲಿ ಸಂಭವಿಸಿದ ಮೂರನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ. 2006 ರಿಂದ 2026 ರವರೆಗಿನ ಅವಧಿಯಲ್ಲಿ ದೇಶದ ವಿವಿಧ ಐಐಟಿಗಳಲ್ಲಿ ಒಟ್ಟು 171 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆತಂಕಕಾರಿ ಅಂಕಿಅಂಶವೂ ಹೊರಬಿದ್ದಿದೆ.





Leave a comment