SUDDIKSHANA KANNADA NEWS/ DAVANAGERE/ DATE:25-12-2024
ದಾವಣಗೆರೆ: ಅಲೆಮಾರಿ ಪಟ್ಟಿಯಿಂದ ಕೊರಚರನ್ನು ಹೊರಗಿಡುವ ಛಲವಾದಿ ನಾರಾಯಣಸ್ವಾಮಿ ಹೇಳಿಕೆಯನ್ನು ಅಖಿಲ ಕರ್ನಾಟಕ ಕೊರಚರ ಮಹಾ ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪ ನಡೆಯುವ ವೇಳೆ ಸುವರ್ಣ ಸೌಧದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಅಲೆಮಾರಿ ಸಂಘಟನೆಯೊಂದರ ಮನವಿ ಸ್ವೀಕರಿಸಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ‘ಕೊರಚ, ಕೊರಮರು ಪರಿಶಿಷ್ಟ ಅಲೆಮಾರಿ ಪಟ್ಟಿ (49ರಲ್ಲಿ) ಬರುವುದಿಲ್ಲ. ಮಾತ್ರವಲ್ಲ ಪರಿಶಿಷ್ಟ ಜಾತಿ ಒಳಮೀಸಲಾತಿ ಪಟ್ಟಿಗೂ ಅವರು ಸೇರುವುದಿಲ್ಲ ಎಂಬ ಕಡು ಮೂರ್ಖತನದ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದರು.
ಯಾವುದೇ ಆಧಾರವಿಲ್ಲದ ಈ ರೀತಿ ಹೇಳಿಕೆ ನೀಡಿ, ಅಲೆಮಾರಿ ಸಮುದಾಯಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುವ ನಾರಾಯಣ ಸ್ವಾಮಿ 15 ದಿನಗಳ ಒಳಗೆ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಸಮಾಜದ ಕ್ಷಮೆ ಕೇಳಬೇಕು. ಇಲ್ಲವಾದರೆ
ಕೊರಚ ಸಮುದಾಯದ ಸಂಘಟನೆಗಳು ನಾರಾಯಣ ಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಲಿದ್ದೇವೆ. ಕಂಡಕಂಡಲ್ಲಿ ಅಡ್ಡಗಟ್ಟಿ ಪ್ರತಿಭಟನೆ ಮಾಡಲಾಗುವುದು. ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾರಾಯಣಸ್ವಾಮಿ ಅವರನ್ನು ಕರೆಸಿ ಬುದ್ದಿ ಹೇಳಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಾರಪ್ಪ ಪೈಲ್ವಾನ್, ಸಿದ್ದೇಶ್ ಮಾದಾಪುರ, ಕೊಟ್ರೇಶ್, ಸಂತೋಷ, ಅಜ್ಜಯ್ಯ, ಚಂದ್ರು ಕವಾಡಿ, ಮಧುಕುಮಾರ್,ದುರುಗಪ್ಪ ಇದ್ದರು.