SUDDIKSHANA KANNADA NEWS/ DAVANAGERE/ DATE:11-09-2024
ಬೆಂಗಳೂರು: ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ. ಹಾಗಾಗಿ ಈ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಬೆಂಗಳೂರಿನ ಅರಣ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಇತರ ಸಚಿವರು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಈ ಎಲ್ಲ ಹಗರಣಗಳ ತನಿಖೆಗೆ ತ್ವರಿತವಾಗಿ ಚಾಲನೆ ನೀಡಲು ಹಾಗೂ ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಕುರಿತ ತನಿಖೆಗಳ ಪ್ರಗತಿ ಹಾಗೂ ಸಮನ್ವಯ ಸಂಬಂಧ ಕ್ರಮ ವಹಿಸುವ ನಿಟ್ಟಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಸಂತೋಷ್ ಲಾಡ್ ಹಾಗೂ ಎಚ್.ಕೆ.ಪಾಟೀಲ್ ರವರು ಸದಸ್ಯರಾಗಿದ್ದಾರೆ. ಸಮಿತಿಯು ವರದಿಯನ್ನು ನೀಡಲು ಒಂದರಿಂದ ಎರಡು ತಿಂಗಳ ಅವಧಿಯನ್ನು ನೀಡಲಾಗಿದೆ. ಪಿಎಸ್ ಐ ಹಗರಣ, 40% ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗಗಳನ್ನು ರಚಿಸಲಾಗಿದೆ. ಅದರಲ್ಲಿ ಕೋವಿಡ್ 19 ಬಗ್ಗೆ ತನಿಖಾ ಆಯೋಗ ಪೂರ್ವಭಾವಿ ವರದಿಯನ್ನು ನೀಡಿದ್ದು, ಅಧಿಕಾರಿಗಳ ಪರಿಶೀಲನೆಯ ನಂತರ ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಮ ಖಂಡಿತ:
ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಸರ್ಕಾರ
ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ತಪ್ಪು ಮಾಡಿದವರ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸ್ ಐ ಹಗರಣ- ಎಸ್ ಐಟಿ ಕ್ರಮಕ್ಕೆ ಸೂಚನೆ:
ಪಿಎಸ್ ಐ ಹಗರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವೀರಪ್ಪ ಆಯೋಗ ವರದಿಯನ್ನು ನೀಡಿದ್ದು, ಯಾವುದೇ ಕ್ರಮವಾಗಿಲ್ಲದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ಹಗರಣದ ಬಗ್ಗೆ ವಿಶೇಷ
ತನಿಕಾ ತಂಡ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ:
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಹಾಗೂ ಕೇಂದ್ರ ಜಾರಿ ನಿರ್ದೇಶನಾಲಯದ ತನಿಖೆಗಳು ನಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಪ್ರಕರಣದ ಬಗ್ಗೆ ಎಸ್ ಐ ಟಿಯವರೂ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದು, ಈ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.