SUDDIKSHANA KANNADA NEWS/ DAVANAGERE/ DATE:01-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಜಿಲ್ಲೆಯ ಹಳ್ಳಿ ಹಳ್ಳಿಗಳಿಗೂ ಸುತ್ತಿದ್ದೇನೆ. ಜನರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಇಲ್ಲವೇ ರಾಷ್ಟ್ರಮಟ್ಟದಲ್ಲಿ ನನ್ನನ್ನ ಬಳಸಿಕೊಳ್ಳಬೇಕೋ ಎಂಬ ಬಗ್ಗೆ ಎಐಸಿಸಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ನನ್ನ ಕಾರ್ಯವೈಖರಿ ಗುರುತಿಸಿರುವ ಪರಿ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರಿಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷ ವಿನಯ್ ಕುಮಾರ್ ಜಿ.ಬಿ. ಕಕ್ಕರಗೊಳ್ಳ ತಿಳಿಸಿದರು.
ಚನ್ನಗಿರಿ ಪ್ರವಾಸಿ ಮಂದಿರದಲ್ಲಿಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರಿಚ್ ವಿಭಾಗದ ವತಿಯಿಂದ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಯಾರ ಬಗ್ಗೆಯೂ ನಕರಾತ್ಮಕವಾಗಿ ಮಾತನಾಡಿಲ್ಲ. ನನಗೆ ಟಿಕೆಟ್ ನೀಡಿದರೆ ಗೆಲುವು ಖಚಿತ. ನೀವೆಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.
ನಾನು ಚನ್ನಗಿರಿಯಲ್ಲಿ ನಡೆಸುತ್ತಿರುವ ಮೊದಲ ಸಭೆ ಅಲ್ಲ. ಕಳೆದ ಏಳೆಂಟು ತಿಂಗಳ ಹಿಂದೆ ಸಭೆ ನಡೆಸಿದ್ದೆ. ನಾನು ಆಗ ಆಕಾಂಕ್ಷಿ ಎಂದು ಹೇಳಿದ್ದೆ. ನಾನು ಇರುತ್ತೇನೋ ಇಲ್ಲವೋ ಎರಡರಿಂದ ಮೂರು ತಿಂಗಳಿಗೆ ಹೋಗಿ ಬಿಡುತ್ತೇನೆ ಎಂದುಕೊಂಡವರೇ ಹೆಚ್ಚು. ಆದ್ರೆ, ಈಗ ಜನರ ಪ್ರೀತಿ, ವಿಶ್ವಾಸ ಸಿಕ್ಕಿದೆ. ಇರ್ಫಾನ್ ಅವರು ಪತ್ರಿಕಾಗೋಷ್ಠಿ ನಡೆಸಿ ನನಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಮಾಡಿದ್ದಾರೆ. ನನ್ನನ್ನು ಹೊರತುಪಡಿಸಿ ಟಿಕೆಟ್ ನೀಡಬೇಕು ಎಂದು ಬಹಿರಂಗವಾಗಿ ಹೇಳಿದ್ದು ಇರ್ಫಾನ್ ಅವರು. ಈ ರೀತಿಯಲ್ಲಿ ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅವರೆಲ್ಲರೂ ಬಹಿರಂಗವಾಗಿ ಮಾತನಾಡಿ, ಒತ್ತಾಯಿಸಿ. ಬೆಂಬಲಿಸಿ ಎಂದು ಮನವಿ ಮಾಡಿದರು.
ಎರಡು ಮೂರು ತಿಂಗಳಿನಿಂದಲೂ ಕೇಳಿಕೊಳ್ಳುತ್ತಿದ್ದೆ. ನಾನು ಓಡಾಡುತ್ತಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ನನ್ನದೇ ಆದ ಕನಸುಗಳಿವೆ ಎಂದು. ನನ್ನ ಪರವಾಗಿ ಹೆಚ್ಚು ಮಂದಿಗೆ ಒಲವಿದ್ದರೂ ಬಹಿರಂಗವಾಗಿ ಹೇಳುತ್ತಿರಲಿಲ್ಲ. ಮನೆಯೊಳಗೆ, ದೇವಸ್ಥಾನದೊಳಗೆ ಮಾತನಾಡಿದರೆ ಆಗದು. ಬಹಿರಂಗವಾಗಿ ಒತ್ತಾಯ ಮಾಡಬೇಕು. ಆಗ ಮಾತ್ರ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದಾರೆ. ಕೆಲವೇ ಕೆಲವರು ಮಾತ್ರ ಬಹಿರಂಗವಾಗಿ ಹೇಳ್ತಾರೆ. ನನಗೂ ಹೇಳಲ್ಲ, ಬೆಂಗಳೂರು, ದೆಹಲಿಗೆ
ಹೋಗಿ ನನ್ನ ಪರ ಲಾಬಿ ಮಾಡ್ತಾರೆ. ನಾನು ಏಕಾಂಗಿ ಅಲ್ಲ. ಎಲ್ಲಾ ಶಾಸಕರ ಬೆಂಬಲ ಇದೆ, ಬ್ಲಾಕ್ ಅಧ್ಯಕ್ಷರ ಬೆಂಬಲವೂ ಇದೆ. ಮೊದಲು ನಾನು ಬಂದಾಗ ಅನುಮಾನ ಇತ್ತು. ನನ್ನ ಹಿಂದೆ ಯಾರು ಜನ ಬರುತ್ತಾರೆ ಎಂದುಕೊಂಡಿದ್ದರು. ಆದರೆ ದಿನ ಕಳೆದಂತೆ ಬೆಂಬಲವೂ ವ್ಯಕ್ತವಾಗುತ್ತಿದೆ ಎಂದರು.
ನಾನು ಬರುವ ಮುನ್ನ ನನಗೆ ಸ್ಪಷ್ಟತೆ ಇತ್ತು. ನಾಯಕರ ಹಿಂದೆ ಸುತ್ತಾಡಬಾರದು. ಬಾಲಂಗೋಚಿಯಾಗಬಾರದು. ಹಳ್ಳಿ ಹಳ್ಳಿಗೆ ಹೋಗಿ ಸಾಮಾನ್ಯ ಜನರ ವಿಶ್ವಾಸ ಗಳಿಸಬೇಕೆಂಬ ಸ್ಪಷ್ಟತೆ ಇತ್ತು. ಸುಮಾರು 650ರಿಂದ 700 ಹಳ್ಳಿಗಳಲ್ಲಿ ಸುತ್ತಿದ್ದೇನೆ. ಜಿಲ್ಲೆಯಲ್ಲಿ ಒಟ್ಟು 986 ಹಳ್ಳಿಗಳಿವೆ. ಶೇಕಡಾ 70ರಷ್ಟು ಹಳ್ಳಿಗಳಲ್ಲಿ ಓಡಾಡಿದ್ದೇನೆ. ಇನ್ನು 20ರಿಂದ 30 ಹಳ್ಳಿಗಳನ್ನು ಸುತ್ತಬೇಕು ಎಂದುಕೊಂಡಿದ್ದೆ. ಅಷ್ಟರೊಳಗೆ ಪಾದಯಾತ್ರೆ ಮುಗಿಯಿತು. ಶೇಕಡಾ 80ರಷ್ಟು ಹಳ್ಳಿಗಳಿಗೂ ಬಿಜೆಪಿ ಸಂಸದರು ಭೇಟಿ ನೀಡಿಲ್ಲ. ಅನುದಾನವನ್ನೂ ಬಳಸಿಲ್ಲ ಎಂದು ಆರೋಪಿಸಿದರು.
ಐಎಎಸ್ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಸಂವಿಧಾನ, ಸಾಮಾಜಿಕ ವ್ಯವಸ್ಥೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಇದರ ಮೇಲೆ ಪ್ರಬಂಧ ಬರೆಯಿರಿ, ನೂರಾರು ಪ್ರಶ್ನೆ ಹುಟ್ಟುಹಾಕಿ ಕೊಡುತ್ತೇವೆ. ನಾನು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿ ಓಡಾಡಲು ಶುರು ಮಾಡಿದ ಮೇಲೆ ನನಗೆ ಶಾಕ್ ಆಯ್ತು. ಎಂಪಿ ಆಯ್ಕೆಯಾದವರು ಜನಪ್ರತಿನಿಧಿ ಒಂದು ದಿನವೂ ಬಂದಿಲ್ಲ ಎಂದರೆ ಎಂತ ರಾಜಕೀಯ ವ್ಯವಸ್ಥೆ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಅಧಿಕಾರಕ್ಕೆ ಗೌರವ ಇಲ್ಲದೇ, ಅನಿಸಿಕೆಗೆ ಮನ್ನಣೆ ಇಲ್ಲದೇ ಯಾರೋ ಯಾವುದೋ ಮಾರ್ಗದಿಂದ ಟಿಕೆಟ್ ತರುವ ವ್ಯವಸ್ಥೆ ಈಗಲೂ ಇದೆ. ಶೇಕಡಾ 70ರಷ್ಟು ಜನರು ವಿನಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ಸರ್ವೇಯಲ್ಲಿ ಬಂದಿದೆ. ಆದ್ರೆ, ಯಾರೋ ಅಧಿಕಾರ ಬಳಸಿಕೊಂಡು, ರಾಜಕೀಯ ಪ್ರಭಾವ, ಹಣ ಕೊಟ್ಟು ಟಿಕೆಟ್ ತರುವ ಕೆಲಸವೂ ಆಗುತ್ತಿದೆ. ವಾಟ್ಸಪ್, ಇನ್ ಸ್ಟಾಗ್ರಾಂ, ಫೇಸ್ ಬುಕ್ ನಲ್ಲಿ ನನ್ನ ಪರವಾಗಿ ಅಭಿಯಾನ ನಡೆಸಿದ್ದಾರೆ. ಇದು ಖುಷಿಯ ವಿಚಾರ ಎಂದು ವಿನಯ್ ಕುಮಾರ್ ತಿಳಿಸಿದರು.
ಎಂಪಿ ಟಿಕೆಟ್ ಮಾತ್ರವಲ್ಲ, ನಾನು ಮುಂದಿನ ಐದು ವರ್ಷವೂ ಏನು ಮಾಡಬೇಕು ಎಂಬ ಆಲೋಚನೆ ಹೊಂದಿರುವ ಎಐಸಿಸಿ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇದು ನನಗೆ ತುಂಬಾನೇ ಖುಷಿ ಕೊಟ್ಟಿದೆ ಎಂದು ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಯುವ ಮುಖಂಡರು, ಮಹಿಳಾ ಪದಾಧಿಕಾರಿಗಳು, ಜಿ.ಪಂ., ತಾ.ಪಂ., ಗ್ರಾ.ಪಂ. ಹಾಲಿ, ಮಾಜಿ ಸದಸ್ಯರು, ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು ಆಗಮಿಸಿ ವಿನಯ್ ಕುಮಾರ್ ಅವರಿಗೆ ಬೆಂಬಲ ಸೂಚಿಸಿದರು.