SUDDIKSHANA KANNADA NEWS/ DAVANAGERE/ DATE:13-08-2024
ದಾವಣಗೆರೆ: ಖೋ ಖೋ, ಕಬಡ್ಡಿ, ವಾಲಿಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ 13 ಅನುಭವಿ ಕೋಚ್ಗಳನ್ನು ಹೊಂದಿದ್ದ ದಾವಣಗೆರೆಯಲ್ಲಿ ಮತ್ತೆ ಅದೇ ವಾತಾವರಣ ಮರುಕಳಿಸಲಿದ್ದು, ಕ್ರೀಡಾ ಇಲಾಖೆಗೆ ಚುರುಕು ನೀಡುವ ಮೂಲಕ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕ್ರೀಡಾಪಟುಗಳ ನಿರೀಕ್ಷೆಗೆ ಸ್ಪಂದಿಸಲಿದ್ದಾರೆ ಎಂದು ದೂಡಾ ಅಧ್ಯಕ್ಷ, ಹಿರಿಯ ಕ್ರೀಡಾಪಟು ದಿನೇಶ ಕೆ.ಶೆಟ್ಟಿ ಭರವಸೆ ನೀಡಿದ್ದಾರೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸೃಷ್ಟಿ ಕಬಡ್ಡಿ ಅಕಾಡೆಮಿಯಿಂದ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರೊ ಕಬಡ್ಡಿ ಟೂರ್ನಿಯ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾದ ಚಂದ್ರನಾಯ್ಕಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮತ್ತೆ ದಾವಣಗೆರೆಯಲ್ಲಿ ಕ್ರೀಡಾಕ್ಷೇತ್ರದಲ್ಲಿ ಹಳೆಯ ಲಯ ಕಂಡುಕೊಳ್ಳಬೇಕೆಂಬ ಎಲ್ಲರ ನಿರೀಕ್ಷೆಯಂತೆ ಬದಲಾವಣೆ ಆಗಲಿದೆ ಎಂದರು.
ಮುಧೋಳ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಪ್ರತಿಭೆಗಳು ಕ್ರೀಡಾ ಹಾಸ್ಟೆಲ್ನಲ್ಲಿದ್ದು, ಓದುತ್ತಾ, ಕ್ರೀಡಾಭ್ಯಾಸ ಮಾಡುತ್ತಿದ್ದಾರೆ. ಅಂತಹ ಮಕ್ಕಳ ಭವಿಷ್ಯ, ಬದುಕನ್ನು ಕಟ್ಟಿಕೊಡುವ ಕೆಲಸ ಆಗಲಿದೆ. ಈಚೆಗೆ ಕ್ರೀಡಾ ಹಾಸ್ಟೆಲ್ನ ಅವ್ಯವಸ್ಥೆ ಹಿನ್ನೆಲೆಯಲ್ಲಿ ತಾವು ಖುದ್ದಾಗಿ ಭೇಟಿ ನೀಡಿದ್ದ ವೇಳೆ ಮಕ್ಕಳು ಅಲ್ಲಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ತಂದರು. ಈ ವಿಚಾರವನ್ನು ಸಚಿವರು, ಶಾಸಕರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸೂಕ್ತ ಕ್ರೀಡಾಧಿಕಾರಿ, ತರಬೇತುದಾರರನ್ನು ದಾವಣಗೆರೆಗೆ ತರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.
ಎಸ್.ಎಸ್.ಮಲ್ಲಿಕಾರ್ಜುನವರು ಹಿಂದೆ ಕ್ರೀಡಾ ಸಚಿವರಿದ್ದಾಗ 13 ಕೋಚ್ಗಳು ಇಲ್ಲಿದ್ದರು. ಸಾಕಷ್ಟು ಕ್ರೀಡಾ ಪ್ರತಿಭೆಗಳು ಸಾಧನೆ ಮಾಡಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು. ಅನೇಕರು ಕ್ರೀಡೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಮತ್ತೆ ಅಂತಹ ಲಯವನ್ನು ದಾವಣಗೆರೆ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ಕ್ರೀಡಾ ಇಲಾಖೆಯಲ್ಲೂ ಬದಲಾವಣೆ ಆಗಬೇಕಿದೆ. ಶೀಘ್ರವೇ ಅಂತಹ ಬದಲಾವಣೆ ಆಗಲಿದೆ. ಜಿಲ್ಲಾ ಕ್ರೀಡಾಂಗಣ ಎಲ್ಲರಿಗೂ ಅಗತ್ಯವಿದ್ದು, ನಮ್ಮ ಜಿಲ್ಲಾ ಕ್ರೀಡಾಂಗಣ ಯಾವುದೇ ಕಾರಣಕ್ಕೂ ಕ್ರೀಡೆ, ಕ್ರೀಡಾಪಟುಗಳ ಕೈತಪ್ಪುವುದಿಲ್ಲ ಎಂದು ಅವರು ಹೇಳಿದರು.
ಸಿಂಥೆಟಿಕ್ ಟ್ರ್ಯಾಕ್ ಮಾಡಲು ಹಿಂದೆಯೇ ವಿರೋಧಿಸಿದ್ದೆವು. ಈಗಲೂ ನಮ್ಮ ವಿರೋಧವಿದೆ. ಕ್ರೀಡೆಗೆ, ಕ್ರೀಡಾಭ್ಯಾಸಕ್ಕೆ, ಕ್ರೀಡಾಪಟುಗಳಿಗೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ಸಾವಿರಾರು ಕ್ರೀಡಾಪಟುಗಳಿಗೆ ಆಸರೆಯಾದ ಇಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡುವ ಬದಲು ಬೇರೆ ಕಡೆ ಮಾಡಲು ನಮ್ಮ ವಿರೋಧವಿಲ್ಲ. ದೇವರಾಜ ಅರಸು ಬಡಾವಣೆ ಮೈದಾನ ಅಥವಾ ಬೇರೆ ಕಡೆ ಹೊಸದಾಗಿ ಮೈದಾನ ನಿರ್ಮಿಸಿ, ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಅದಕ್ಕೆ ನಮ್ಮದೂ ಸಹಮತವಿದೆ. ಆದರೆ, ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ಗೆ ನಾವ್ಯಾರೂ ಒಪ್ಪುವುದಿಲ್ಲ ಎಂದು ದಿನೇಶ ಶೆಟ್ಟಿ ಸ್ಪಷ್ಟಪಡಿಸಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ಕ್ರೀಡಾಭ್ಯಾಸದ ಜೊತೆಗೆ ಓದಿನತ್ತಲೂ ಕ್ರೀಡಾಪಟುಗಳು ಗಮನ ಹರಿಸಬೇಕು. ಕ್ರೀಡೆಯಿಂದ ಬದುಕು ಕಟ್ಟಿಕೊಂಡವರ ಸಾಲು ಸಾಲು ಇತಿಹಾಸ ದಾವಣಗೆರೆ ಜಿಲ್ಲಾ ಕ್ರೀಡಾಂಗಣಕ್ಕಿದೆ. ಇಂತಹ ಕ್ರೀಡಾಂಗಣ ಸಿಂಥೆಟಿಕ್ ಟ್ರ್ಯಾಕ್ ಹೆಸರಿನಲ್ಲಿ ಕ್ರೀಡಾಪಟುಗಳ ಕೈತಪ್ಪದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕ್ರೀಡೆಗೆ ಪ್ರತಿಯೊಬ್ಬರೂ ಪ್ರೋತ್ಸಾಹಿಸುವ ಮೂಲಕ ಪ್ರತಿಭೆಗಳಿಗೆ ಆಸರೆಯಾಗಬೇಕು ಎಂದರು.
ಅಕಾಡೆಮಿ ಅಧ್ಯಕ್ಷ ಎಂ.ದೊಡ್ಡಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೋಹನರಾಜ, ಎಚ್.ಚಂದ್ರಪ್ಪ, ಸಚ್ಚಿದಾನಂದಸ್ವಾಮಿ, ಭೀಮರಾಜ, ಕಬಡ್ಡಿ ಮಲ್ಲಿಕಾರ್ಜುನ(ಮಲ್ಲು), ಎಚ್.ಆರ್.ರುದ್ರಪ್ಪ, ಎಂ.ಶಿವಮೂರ್ತಿ,
ಜೆಜೆಎಂ ವೈದ್ಯಕೀಯ ಕಾಲೇಜಿನ ಗೋಪಾಲಕೃಷ್ಣ, ಮಾಧವಿ ಗೋಪಿ, ಜಯಪ್ರಕಾಶ(ಜೆಪಿ), ಶಿವಯೋಗಿ, ರಾಕೇಶ, ಸಂತೋಷ ಬಾಬು, ಕಾರಕಪ್ಪ, ಸುಭಾಷ್, ನೂರುಲ್ಲಾ, ಎ.ವೈ.ಶಿವಕುಮಾರ, ಇತರರು ಇದ್ದರು. ಇದೇ ವೇಳೆ ಹಿರಿಯ ಕ್ರೀಡಾಪಟುಗಳಾದ ದೂಡಾ ನೂತನ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್, ಪ್ರೊ ಕಬಡ್ಡಿ ಟೂರ್ನಿಯ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾದ ದಾವಣಗೆರೆಯ ಪ್ರಥಮ ಕಬಡ್ಡಿ ಪಟು ಚಂದ್ರನಾಯ್ಕಗೆ ಸನ್ಮಾನಿಸಿ, ಶುಭ ಹಾರೈಸಲಾಯಿತು.