SUDDIKSHANA KANNADA NEWS/ DAVANAGERE/ DATE:19-02-2024
ದಾವಣಗೆರೆ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತನ್ನ ಕಾರಿನಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಹದಡಿ ಮತ್ತು ಆರನೇ ಕಲ್ಲು ಮಧ್ಯೆ ಬಸ್ ಅಪಘಾತದಲ್ಲಿ ಕುಕ್ಕವಾಡ ಗ್ರಾಮದ ಹಾಲಮ್ಮ (55)ಗಂಭೀರವಾಗಿ ಗಾಯಗೊಂಡಿದ್ದು, ಸಕಾಲದಲ್ಲಿ ಆಂಬ್ಯುಲೆನ್ಸ್, ಯಾವುದೇ ವಾಹನಗಳು ಬಾರದೆ ರಸ್ತೆಯಲ್ಲಿಯೇ ನರಳಾಡುತ್ತಿದ್ದರು.
ಇದೇ ಸಮಯಕ್ಕೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಾರಿಗನೂರು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವಾಗ ದಾರಿ ಮಧ್ಯೆ ಗಾಯಗೊಂಡು ನರಳುತ್ತಿದ್ದ ಮಹಿಳೆಯನ್ನು ಕಂಡ ಶಾಸಕ ಬಸವಂತಪ್ಪ, ಕೂಡಲೇ ತನ್ನ ಕಾರಿನಲ್ಲಿಯೇ ಎಸ್.ಎಸ್.ಎಂ.ಹೈಟೆಕ್ ಆಸ್ಪತ್ರೆಗೆ ದಾಖಲಿಸಿದರು.
ಮಹಿಳೆಯ ಕುಟುಂಬ ಸದಸ್ಯರಿಗೆ ವೈಯಕ್ತಿಕ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಕುಕ್ಕವಾಡ ಗ್ರಾಮದಿಂದ ದಾವಣಗೆರೆಯ ಸಂಬಂಧಿಕರೊಬ್ಬರ ಮನೆಯಲ್ಲಿ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಬರುವಾಗ ಹದಡಿ ಮತ್ತು ಆರನೇ ಕಲ್ಲು ಮಧ್ಯೆ ಚಾಲಕ ಬ್ರೇಕ್ ಹಾಕಿದ ಸಂದರ್ಭದಲ್ಲಿ ಬಾಗಿಲ ಬಳಿ ನಿಂತಿದ್ದ ಆ ಮಹಿಳೆ ಕೆಳಗೆ ಬಿದ್ದು ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕೈಕಾಲುಗಳು ತರಚಿವೆ. ಈ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.