SUDDIKSHANA KANNADA NEWS/ DAVANAGERE/ DATE:12-02-2024
ದಾವಣಗೆರೆ: ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಫಲಕ ಅಳವಡಿಕೆಗೆ ಈಗ ಜನರು ಮುಗಿಬಿದ್ದಿದ್ದಾರೆ. ಸುಮಾರು 2 ತಿಂಗಳುಗಳ ಕಾಲ ಕಾಯಬೇಕಾಗಿದೆ. ನೀಡಿದ್ದ ಗಡುವು ಹತ್ತಿರವಾಗುತ್ತಿರುವ ಕಾರಣ ಬೈಕ್, ಕಾರು ಸೇರಿದಂತೆ ಎಲ್ಲಾ ವಾಹನಗಳ ಮಾಲೀಕರು ಹೆಚ್ ಎಸ್ ಆರ್ ಪಿ ಫಲಕ ಅಳವಡಿಕೆಗೆ ಆನ್ ಲೈನ್ ನಲ್ಲಿ ದಾಖಲಿಸಲು ಮುಗಿಬಿದ್ದಿದ್ದು, ಶೋ ರೂಂಗಳಲ್ಲಿ ಬ್ಯುಸಿಯ ವಾತಾವರಣ ಕೇಳಿ ಬರುತ್ತಿದೆ.
ಬುಕ್ಕಿಂಗ್ ಮಾಡುವುದು ಹೇಗೆ…?
ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ : https://transport.karnataka.gov.in ಗೆ ಭೇಟಿ ನೀಡಿ, ಅಲ್ಲಿ ಎಚ್‌ಎಸ್‌ಆರ್‌ಪಿಗೆ ಕೋರಿಕೆ ಸಲ್ಲಿಸಬೇಕು.
ನಂತರ ನೋಂದಣಿ ಪತ್ರ ಒಳಗೊಂಡಂತೆ ಅಗತ್ಯ ದಾಖಲೆಗಳನ್ನು ದಾಖಲಿಸಬೇಕು. ಅದು ಸಂಬಂಧಪಟ್ಟ ಒಇಎಂಗೆ ಹೋಗುತ್ತದೆ. ಅಲ್ಲಿ ಹತ್ತಿರದ ಡೀಲರ್ ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು.
ತದನಂತರ ದಿನಾಂಕ ಮತ್ತು ಸಮಯ ನಿಗದಿ ಯಾಗುತ್ತದೆ. ಜತೆಗೆ ಆಯಾ ಸಮೀಪದ ಡೀಲರ್‌ಗೂ ಸಂದೇಶ ತಲುಪುತ್ತದೆ.
ನಿಗದಿಪಡಿಸಿದ ಅವಧಿಯಲ್ಲಿ ಖುದ್ದು ಮನೆಗೆ ಬಂದು, ನಂಬರ್ ಪ್ಲೇಟ್ ಅಳವಡಿಸಲಾಗುತ್ತದೆ.
“ಕಳೆದ 3 ವಾರಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೆ ಅಂದಾಜು 15 ಲಕ್ಷಕ್ಕಿಂತ ಹೆಚ್ಚು ವಾಹನಗಳು ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಮುಂದಿನ ವಾರದಲ್ಲೂ ಇನ್ನೂ ಉತ್ತಮ ಸ್ಪಂದನೆ ದೊರೆಯುವ ವಿಶ್ವಾಸ ಇದೆ. ವಿಸ್ತರಣೆಯ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರು ತಿಳಿಸಿದ್ದಾರೆ.
ಫಲಕ ಹೇಗೆ ಅಳವಡಿಸುವುದು…?
ವಾಹನಗಳ ಹಳೆಯ ನಂಬರ್ ಪ್ಲೇಟ್ ಬದಲಾಯಿಸಿ ಅತಿಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ವಿಧಿಸಿದ್ದ ಗಡುವು ಸಮೀಪಿಸುತ್ತಿರುವ ಬೆನ್ನಲ್ಲೇ ವಾಹನಗಳ ಮಾಲೀಕರಿಂದ ಅವಧಿ ವಿಸ್ತರಣೆಗೆ ಒತ್ತಾಯ
ಕೇಳಿ ಬರುತ್ತಿದೆ.
ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ನಿಧಾನಗತಿಯಿಂದ ಹಿಡಿದು ಹತ್ತುಹಲವು ತಾಂತ್ರಿಕ ತೊಂದರೆಗಳು ಎಚ್‌ಎಸ್‌ಆರ್‌ಪಿ ಬುಕಿಂಗ್ ವೇಳೆ ಕಂಡು ಬರುತ್ತಿದೆ. ಹಾಗಾಗಿ, ಫೆ. 17ರ ಒಳಗೆ ಬುಕಿಂಗ್ ಮತ್ತು ಅಳವಡಿಕೆ ಕಷ್ಟಸಾಧ್ಯ. ಹಾಗೆ ನೋಡಿದರೆ, ಬಹುತೇಕರು ತಮ್ಮದಲ್ಲದ ತಪ್ಪಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಹೊಸ ವ್ಯವಸ್ಥೆಯಿಂದ ಹೊರಗುಳಿಯಲಿದ್ದಾರೆ.
ಆದ್ದರಿಂದ ಕನಿಷ್ಠ ಇನ್ನೂ ಒಂದು ತಿಂಗಳಾದರೂ ಗಡುವು ವಿಸ್ತರಣೆ ಮಾಡಬೇಕು ಎಂದು ವಾಹನಗಳ ಮಾಲೀಕರು ಆಗ್ರಹಿಸಿದ್ದಾರೆ.
ನನ್ನದು ಹೊಂಡಾ ಆ್ಯಕ್ಟಿವಾ ಇದೆ. ವಾಹನ ದಾವಣಗೆರೆಯಲ್ಲಿದ್ದರೆ, ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಊರಿನಲ್ಲಿ ಯಾವುದೇ ವಾಹನ ತಯಾರಕರು ಇಲ್ಲ. ಅದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಕುಟುಂಬದ ಸದಸ್ಯರು ಊರಿಗೆ ಹೋಗಿದ್ದಾರೆ. ಈ ಮಧ್ಯೆ ಎಚ್‌ಎಸ್‌ಆರ್‌ಪಿ ಬುಕಿಂಗ್‌ಗೆ 7 ದಿನಗಳು ಮಾತ್ರ ಉಳಿದಿವೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಕೊನೆಪಕ್ಷ 15 ದಿನಗಳ ಮಟ್ಟಿಗಾದರೂ ಅವಧಿ ವಿಸ್ತರಿಸಿದರೆ ಅನುಕೂಲ’ ಎಂದು ಹೇಳುತ್ತಿದ್ದಾರೆ.
“ನನ್ನದು ಹೀರೋಹೊಂಡಾ ಸ್ಪ್ಲೆಂಡರ್ ಇದೆ. ಈಗ ಆ ಕಂಪನಿ ಇಬ್ಭಾಗವಾಗಿದ್ದು, ನಾವು ಯಾರ ಮೊರೆ ಹೋಗಬೇಕು.? ಈ ಬಗ್ಗೆ ಸ್ಪಷ್ಟತೆ ಇಲ್ಲ. ಇಂತಹ ಹಲವು ಗೊಂದಲಗಳು ಇವೆ. ಈ ನಿಟ್ಟಿನಲ್ಲೂ ಸಾರಿಗೆ ಇಲಾಖೆ ಅಧಿಕಾರಿಗಳು ಗಮನಹರಿಸುವ ಅವಶ್ಯಕತೆ ಇದೆ’ ಎಂದು ಕೆಲವರು ಹೇಳುತ್ತಿದ್ದಾರೆ.
ಶೇ.10ರಷ್ಟೂ ಅಳವಡಿಕೆ ಆಗಿಲ್ಲ…!
ಈ ಮಧ್ಯೆ ಕಳೆದ 4 ತಿಂಗಳಲ್ಲಿ ಎಚ್‌ಎಸ್‌ಆರ್‌ಪಿಗೆ ಪರಿವರ್ತನೆ ಆಗಬೇಕಾದ ಒಟ್ಟಾರೆ ವಾಹನಗಳ ಪೈಕಿ ಶೇ. 10ರಷ್ಟೂ ಇದುವರೆಗೆ ಅಳವಡಿಕೆ ಆಗಿಲ್ಲ. ಅಂದರೆ ಅಳವಡಿಕೆ ಮಾಡಿಕೊಳ್ಳಬೇಕಾದ ವಾಹನಗಳ ಸಂಖ್ಯೆ 1.80 ಕೋಟಿಗೂ ಅಧಿಕ. ಅದರಲ್ಲಿ 13ರಿಂದ 14 ಲಕ್ಷ ವಾಹನಗಳಿಗೆ ಹೊಸ ನಾಮಫಲಕ ಹಾಕಲಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಅಧಿಕವಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಜನ ಇನ್ನೂ ಎಚ್‌ಎಸ್‌ಆರ್‌ಪಿಯಿಂದ ದೂರ ಉಳಿದಿದ್ದು, ರಾಜ್ಯದ ಹಲವು ಭಾಗಗಳಿಂದ ವಾಹನಗಳ ಮಾಲಿಕರಿಂದ ಗಡುವು ವಿಸ್ತರಣೆಗೆ ಒತ್ತಾಯ ಕೂಡ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಸ್ತರಣೆ ಸಾಧ್ಯತೆ ಹೆಚ್ಚಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಎಚ್‌ಎಸ್‌ಆರ್‌ಪಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಆದರೆ, ಇದಕ್ಕೆ ವಾಹನ ಸವಾರರ ಸಹಕಾರ ಮುಖ್ಯ ವಾಗಿದೆ. ಒಇಎಂ (ಒರಿಜಿನಲ್ ಇಕ್ವಿಪ್‌ಮೆಂಟ್ ಮ್ಯಾನ್ಯುಫ್ಯಾಕ್ಚರರ್) ಗಳಿಂದ ಅನುಮೋದಿಸಲ್ಪಟ್ಟ ಮಾರಾಟಗಾರರು ಮತ್ತು ವಿತರಕರು (ಡೀಲರ್) ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುತ್ತಾರೆ. ಅದೂ ಆನ್‌ಲೈನ್ ಮೂಲಕವೇ ಕೋರಿಕೆ ಸಲ್ಲಿಸುವುದು ಅಗತ್ಯ ಮತ್ತು ಅನಿವಾರ್ಯ.