SUDDIKSHANA KANNADA NEWS/ DAVANAGERE/ DATE:22-10-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಂಗಳವಾರ ಕೊಂಚ ವಿರಾಮ ನೀಡಿದ್ದರೂ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆ ತೋಟ, ಜಮೀನುಗಳಿಗೆ ನುಗ್ಗಿದೆ. ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿದ್ದರೆ, ಜಿಲ್ಲೆಯ ಬಹುತೇಕ ಕಡೆ ವರುಣ ಅವಾಂತರಕ್ಕೆ ರೈತರು ಹಾಗೂ ಜನರು ಬೆಚ್ಚಿಬಿದ್ದಿದ್ದಾರೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮುದಹದಡಿ ಗ್ರಾಮದಲ್ಲಿ ರೈತರು ಬೆಳೆದ ಭತ್ತದ ಗದ್ದೆಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಹಾಗೂ ಮನೆಗಳಿಗೆ ಹಾನಿಯಾಗಿದೆ.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅರೊಂದಿಗೆ ಭೇಟಿ ನೀಡಿ ವೀಕ್ಷಿಸುವುದರ ಮೂಲಕ ರಾಜ್ಯ ಸರ್ಕಾರ ಆದಷ್ಟು ಬೇಗ ಪರಿಹಾರ ನೀಡುವಂತೆ ಒತ್ತಾಯಿಸಲಾಯಿತು. ಈ ವೇಳೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಅಜಯ್ ಕುಮಾರ್, ರೈತ ಮುಖಂಡರಾದ ಬಿ. ಎಂ. ಸತೀಶ್, ಬಿಜೆಪಿ ಮುಖಂಡ ಹಾಲೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲೆಯಾದ್ಯಂತ ಸೋಮವಾರ ಮಳೆ ಅಬ್ಬರಿಸಿ ಬೊಬ್ಬಿರಿದಿದೆ. ದಾವಣಗೆರೆ,ಹರಿಹರ, ಹೊನ್ನಾಳಿ- ನ್ಯಾಮತಿ, ಚನ್ನಗಿರಿ, ಮಾಯಕೊಂಡ, ಜಗಳೂರು ಸೇರಿದಂತೆ ವಿವಿಧ ತಾಲ್ಲೂಕಿನಲ್ಲಿ ತಡರಾತ್ರಿ ಬಿರುಸಿನ ಮಳೆ ಸುರಿದಿದೆ.ಬೆಳಗ್ಗೆ ಕಾಣಿಸಿಕೊಂಡ
ವರುಣ ಬಳಿಕ ಬಿಡುವು ನೀಡಿತ್ತು. ರಾತ್ರಿ 8 ಗಂಟೆಯ ಬಳಿಕ ನಿಧಾನವಾಗಿ ಆರಂಭವಾದ ಮಳೆ, ರಭಸವಾಗಿ ಸುರಿಯಿತು. ನಿತ್ಯ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿದ್ದಾರೆ. ಆಗಾಗ ಬಿಡುವು ಕೊಡುತ್ತಾ ಬರುತ್ತಿದ್ದ ಮಳೆಯನ್ನು
ಕಂಡು ತಗ್ಗು ಪ್ರದೇಶಗಳ ಜನರು ಆತಂಕಗೊಂಡಿದ್ದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಚನ್ನಗಿರಿ ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಬೆಳಿಗ್ಗೆ ಬಿರುಸಿನ ಮಳೆಯಾಗಿದೆ.
ಅಡಿಕೆ, ತೆಂಗು, ಬಾಳೆತೋಟಗಳಿಗೆ ನೀರು ನುಗ್ಗಿದೆ. ಕೆಲ ಅಡಿಕೆ ಮರಗಳು ಮುರಿದು ಬಿದ್ದಿವೆ. ಮೆಕ್ಕೆಜೋಳ ಕಟಾವಿಗೆ ಬಂದಿದ್ದು, ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಮೆಕ್ಕೆಜೋಳ ಬೆಳೆಯ ತೆನೆಗಳು ನೆಲಕಚ್ಚಿದ್ದು, ಕಾಳುಗಳು ಮೊಳಕೆ
ಒಡೆಯುತ್ತಿವೆ. ಭತ್ತದ ಬೆಳೆ ಚೆನ್ನಾಗಿದೆ. ಹೀಗೆ ಮಳೆ ಸುರಿದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗುತ್ತದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಹರಿಹರ ತಾಲೂಕಿನ ಮಲೇಬೆನ್ನೂರು ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮೀ ರಂಗನಾಥ ದೇವಾಲಯದ ಕೆರೆ ಭರ್ತಿಯಾಗಿದ್ದು, ಕೆರೆಯ ಹಿಂಭಾಗದ ಜಮೀನುಗಳಿಗೆ ಹಿನ್ನೀರು ನುಗ್ಗಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ. ಹಿನ್ನೀರಿನಲ್ಲಿ ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳು ಹಾಗೂ ಮೆಕ್ಕೆಜೋಳ ಬೆಳೆಗಳು ಜಲಾವೃತವಾಗಿರುವುದನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದರು.
ತೋಟಗಳು ಶೀತಬಾಧೆಗೆ ಸಿಲುಕಿವೆ. ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದೆ. ಕೆರೆ ಹಿನ್ನೀರು ನುಗ್ಗಿರುವುದರಿಂದ ಬೆಳೆಗಳು ನಷ್ಟಕ್ಕೀಡಾಗಿವೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.