ʻರುಚಿಗೆ ತಕ್ಕಷ್ಟು ಉಪ್ಪುʼ ಎಂದು ಹೇಳುವುದು ಹೌದಾದರೂ ಉಪ್ಪು ಬಾಯಿಯ ರುಚಿಗೆ ಮಾತ್ರವಲ್ಲ, ದೇಹದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಉಪ್ಪು ಅಥವಾ ಸೋಡಿಯಂಗೆ ನಮ್ಮ ದೇಹದಲ್ಲಿ ಹೆಚ್ಚಿನ ಕೆಲಸವಿದೆ. ನಮ್ಮ ಶರೀರದ ಕೋಶಗಳಲ್ಲಿರುವ ನೀರಿನಂಶದ ನಿರ್ವಹಣೆಗೆ, ಸ್ನಾಯುಗಳ ಸಂಚಲನಕ್ಕೆ, ನರಗಳ ಕ್ಷಮತೆಗೆ, ಸಣ್ಣ ಕರುಳಿನಲ್ಲಿ ಕೆಲವು ಸತ್ವಗಳು ಹೀರಲ್ಪಡುವುದಕ್ಕೆ, ರಕ್ತದೊತ್ತಡ ನಿರ್ವಹಣೆಗೆ- ಹೀಗೆ ಬಹಳಷ್ಟು ಕೆಲಸಗಳಿಗೆ ಸೋಡಿಯಂ ಆವಶ್ಯಕ.
ಇವೆಲ್ಲ ನಮಗೆ ದೊರೆಯುವ ಮುಖ್ಯ ಮೂಲವೆಂದರೆ ಉಪ್ಪು. ಉಪ್ಪು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ತಿನ್ನುತ್ತಿರುವ ಪ್ರಮಾಣ ಹೆಚ್ಚಿದೆ. ಹೆಚ್ಚು ಉಪ್ಪಿನಕಾಯಿ, ಚಿಪ್ಸ್, ಬೇಕರಿ ತಿಂಡಿಗಳು ಹೊಟ್ಟೆ ಸೇರುತ್ತಿವೆಯೇ? ಹೌದೆಂದಾದರೆ, ರಕ್ತದೊತ್ತಡ ಹೆಚ್ಚುವುದಕ್ಕೆ ಅದೂ ಕಾರಣವಾಗಿರಬಹುದು. ಕೈಬೆರಳುಗಳು, ಪಾದ, ಕಾಲುಗಳು, ಕಿಬ್ಬೊಟ್ಟೆಯಲ್ಲಿ ಊತ ಕಾಣುತ್ತಿದೆಯೇ? ಇದು ದೇಹದಲ್ಲಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಉಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉಪ್ಪಿನಾಂಶ ದೊರೆತಾಗ, ಹೆಚ್ಚು ನೀರಿನಂಶ ಶರೀರದಲ್ಲಿ ಉಳಿಯುವುದು ಸಾಮಾನ್ಯ. ಉಪ್ಪು ತಿಂದವ ನೀರು ಕುಡಿಯಲೇ ಬೇಕೆಂಬ ಗಾದೆ ಸುಳ್ಳಲ್ಲ. ಅತಿಯಾಗಿ ಉಪ್ಪು ತಿಂದರೆ ಬಾಯಾರಿಕೆ ತಪ್ಪಿದ್ದಲ್ಲ. ಅತಿಯಾಗಿ ದಾಹ ಕಾಡುತ್ತಿದೆ ಎಂದಾದರೆ ಉಪ್ಪೆಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸುವುದು ಅಗತ್ಯ.
ರಕ್ತದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ತೆಗೆಯುವ ಭರದಲ್ಲಿ ಕೋಶಗಳಲ್ಲಿರುವ ನೀರಿನಂಶವೆಲ್ಲ ಕೆಲವೊಮ್ಮೆ ಖಾಲಿಯಾಗಿಬಿಡುತ್ತದೆ. ಆಗ ಬಾಯಾರಿಕೆ ಹೆಚ್ಚುತ್ತದೆ. ಸೋಡಿಯಂ ಮತ್ತು ಪೊಟಾಶಿಯಂನಂಥ ಖನಿಜಗಳ ಸಮತೋಲನ ವ್ಯತ್ಯಾಸವಾಗಬಹುದು ಅಧಿಕ ಉಪ್ಪು ತಿನ್ನುವುದರಿಂದ. ಇದರಿಂದ ಹೃದಯದ ಬಡಿತದಲ್ಲೂ ಏರುಪೇರು ಉಂಟಾಗಬಹುದು. ಅದರಲ್ಲೂ ಹೃದಯದ ಸಮಸ್ಯೆಗಳು ಇರುವವರಲ್ಲಿ ಈ ತೊಂದರೆ ಇನ್ನೂ ಹೆಚ್ಚಬಹುದು. ಯಾವುದೇ ಕಾರಣಕ್ಕೂ ತಲೆನೋವು ಬರುವುದು ಸಾಮಾನ್ಯವಾದರೂ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುವುದು ಹೆಚ್ಚು. ಉಪ್ಪು ತಿನ್ನುವುದು ಹೆಚ್ಚಿದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಪದೇಪದೆ ನಿರ್ಜಲೀಕರಣದಿಂದ ತಲೆನೋವು ಬರುತ್ತಿದೆ ಎಂದಾದರೆ, ತಿನ್ನುತ್ತಿರುವ ಉಪ್ಪಿನ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯ. ದೇಹಕ್ಕೆ ಅನಗತ್ಯ ಎನಿಸಿದ ಬಹಳಷ್ಟನ್ನು ವಿಸರ್ಜಿಸಲು ಮೂತ್ರಪಿಂಡಗಳು ಹಗಲಿರುಳು ಶ್ರಮಿಸುತ್ತಲೇ ಇರುತ್ತವೆ. ಉಪ್ಪಿನಂಶ ಹೆಚ್ಚು ಉಳಿಯುತ್ತಿದೆ ದೇಹದಲ್ಲಿ ಎಂದಾದರೆ ಅದನ್ನು ವಿಸರ್ಜಿಸಲು ಸಹ ಕಿಡ್ನಿಗಳು ಹೆಚ್ಚುವರಿ ಕೆಲಸ ಮಾಡಬೇಕು. ಹೀಗೆ ಅತಿಯಾಗಿ ಕೆಲಸ ಮಾಡುವುದರಿಂದ ಕ್ರಮೇಣ ಮೂತ್ರಪಿಂಡಗಳು ಸೋತು, ರೋಗಗಳಿಗೆ ಈಡಾಗಬಹುದು. Ad