ಕಲುಷಿತ ವಾತಾವರಣ, ನೀರಿನಿಂದಾಗಿ ಕೂದಲಿನ ಬಣ್ಣ ಬಿಳಿಯಾಗೋದು ಸಾಮಾನ್ಯ. ಕೆಲವರು ತಲೆ ಕೂದಲಿಗೆ ಬಣ್ಣ ಬಳಿದು, ಬಿಳಿ ಕೂದಲನ್ನು ಮರೆ ಮಾಚುತ್ತಾರೆ. ಮತ್ತೆ ಕೆಲವರು ಬಣ್ಣದಲ್ಲಿ ಕೆಮಿಕಲ್ ಇರುತ್ತೆ ಎನ್ನುವ ಕಾರಣ ಹೇಳಿ ಮೆಹಂದಿ ಬಳಸುತ್ತಾರೆ.
ವಾರದಲ್ಲಿ ಒಂದು ದಿನ ತಲೆಗೆ ಮೆಹಂದಿ ಹಾಕುವ ಜನರಿದ್ದಾರೆ. ಮೆಹಂದಿ ತಲೆಗೆ ತಂಪು, ಅದು ನೈಸರ್ಗಿಕ, ಅದ್ರಿಂದ ಬಿಳಿ ಬಣ್ಣ ಕೆಂಪಾಗಿ ನಿಧಾನವಾಗಿ ಕಪ್ಪಾಗುತ್ತದೆ ಎನ್ನುವ ನಂಬಿಕೆಯಲ್ಲೇ ಬಹುತೇಕರು ಮೆಹಂದಿ ಬಳಸುತ್ತಾರೆ. ಆದ್ರೆ ನೀವು ಕುರುಡಾಗಿ ನಂಬಿರುವ ಈ ಮೆಹಂದಿ ಕೂಡ ನಿಮ್ಮ ತಲೆ ಕೂದಲಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಮೆಹಂದಿ ಅಲರ್ಜಿಗೆ ಕಾರಣವಾಗುತ್ತದೆ.
ಮೆಹಂದಿ ಹಚ್ಚಿದ ನಂತರ ನೀವು ಎಷ್ಟೇ ಸ್ವಚ್ಛಗೊಳಿಸಿದರು ಸ್ವಲ್ಪ ಕಣ ತಲೆಯಲ್ಲಿರುತ್ತದೆ. ಅದು ಅಲರ್ಜಿಯನ್ನುಂಟು ಮಾಡುತ್ತದೆ. ಇದರಿಂದ ತಲೆ ತುರಿಕೆ, ಹೊಟ್ಟು, ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುವ ಸಾಧ್ಯತೆ ಇರುತ್ತದೆ. ಬಿಳಿ ಕೂದಲನ್ನು ಮರೆಮಾಚಲು ನೀವು ಕೂದಲಿಗೆ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಆದರೆ ಈ ಮೆಹಂದಿ ಬರಿ ಬಿಳಿ ಕೂದಲು ಮಾತ್ರವಲ್ಲ ಕಪ್ಪು ಕೂದಲಿನ ಬಣ್ಣವನ್ನು ಕೂಡ ಬದಲಿಸುತ್ತದೆ. ಪದೇ ಪದೇ ಮೆಹಂದಿ ಬಳಸುವವರ ಎಲ್ಲ ಕೂದಲು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಈ ಬಣ್ಣವನ್ನು ಮತ್ತೆ ಬದಲಿಸಲು ಸಾಧ್ಯವಾಗೋದಿಲ್ಲ. ಎಲ್ಲರ ದೇಹ ಪ್ರಕೃತಿಗೂ ಮೆಹಂದಿ ಆಗಿ ಬರೋದಿಲ್ಲ. ಮೆಹಂದಿ ಶುಷ್ಕವಾಗಿರುವ ಕಾರಣ ಅದನ್ನು ಬಳಸಿದ ನಂತ್ರ ನಿಮ್ಮ ಕೂದಲು ಸಿಕ್ಕಾಗುತ್ತದೆ. ಸಿಕ್ಕಾದ ಕೂದಲನ್ನು ಬಾಚಿದರೆ ಅದು ಉದುರುತ್ತದೆ. ವಾರದಲ್ಲಿ ಎರಡರಿಂದ ಮೂರು ದಿನ ನೀವು ಮೆಹಂದಿ ಬಳಸುತ್ತಿದ್ದರೆ ಬಹಳ ಎಚ್ಚರಿಕೆ ವಹಿಸಬೇಕು. ಈ ಮೆಹಂದಿ ತಲೆ ಹೊಟ್ಟಿಗೆ ಕಾರಣವಾಗುತ್ತದೆ. ಇದರಿಂದ ತಲೆಯಲ್ಲಿ ವಿಪರೀತ ತುರಿಕೆ ಕಾಣಿಸಿಕೊಳ್ಳುವುದಲ್ಲದೆ, ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ.