SUDDIKSHANA KANNADA NEWS/ DAVANAGERE/ DATE:04-12-2024
ದಾವಣಗೆರೆ: ನಗರದ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಹಾದು ಹೋಗುವ ಹದಡಿ ರಸ್ತೆಯು ಹಲವಾರು ದಿನಗಳಿಂದ ಹದಗೆಟ್ಟಿದ್ದು ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಮತ್ತು ಪಾದಚಾರಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ. ಕೂಡಲೇ ದುರಸ್ತಿಪಡಿಸಬೇಕು ಎಂದು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಹದಡಿ ರಸ್ತೆಯು ಅತೀ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯಾಗಿದ್ದು, ಪ್ರತಿದಿನ ಅಪಘಾತಗಳು ಸಂಭವಿಸುತ್ತಿವೆ. ವಿದ್ಯಾರ್ಥಿ ಭವನದ ವೃತ್ತದಲ್ಲಿರುವ ಹತ್ತಾರು ಗುಂಡಿಗಳು ವಾಹನ ಸಂಚಾರಕ್ಕೆ ತೀವ್ರ ತೊಂದರೆಯನ್ನುಂಟು ಮಾಡುತ್ತಿವೆ. ಅಲ್ಲಿ ಓಡಾಡುವಾಗ ಜನರು ಅಂಗೈಯಲ್ಲಿ ಜೀವವನ್ನು ಇಟ್ಟುಕೊಂಡು ಸಂಚರಿಸುವಂತಾಗಿದೆ. ಸುಮಾರು ಎರಡು ತಿಂಗಳಿನಿಂದಲೂ ಹದಡಿ ರಸ್ತೆಯಲ್ಲಿ ಗುಂಡಿಗಳಾಗಿದ್ದರೂ ಲೋಕೋಪಯೋಗಿ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಪ್ರತಿದಿನ ಇದೇ ರಸ್ತೆಯ ಮೂಲಕ ನೂರಾರು ಬಾರಿ ಹತ್ತಾರು ಆಸ್ಪತ್ರೆಗಳ ಆಂಬುಲೆನ್ಸ್ಗಳು ಸಾಗುತ್ತವೆ. ಈ ಅಂಬುಲೆನ್ಸ್ನಲ್ಲಿ ಜೀವನ್ಮರಣದ ಹೋರಾಟದಲ್ಲಿರುವ ರೋಗಿಗಳ ಗತಿ ಏನು? ಇಲಾಖೆಯು ಇಲ್ಲಿ ಪ್ರಾಣಬಲಿಯಾಗಲಿ ಎಂಬುದಕ್ಕೆ ಕಾಯುತ್ತಿದೆಯೇ? ಹಾಗೂ ನಿಮ್ಮ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯ ಮೂಲಕ ಸಂಚರಿಸುವುದಿಲ್ಲವೇ? ನಿಮ್ಮ ಕಣ್ಣಿಗೆ ಈ ರಸ್ತೆಯ ದುರಾವಸ್ಥೆ ಕಾಣುತ್ತಿಲ್ಲವೇ? ಹದಡಿ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕೆಂದು
ಒತ್ತಾಯಿಸಿದರು.
ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸದಿದ್ದರೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್, ಪ್ರಧಾನ ಕಾರ್ಯದರ್ಶಿ ಆಜಮ್ ರಜ್ಜಿ, ನಗರಾಧ್ಯಕ್ಷ ಎಸ್. ಸಿದ್ದೇಶ್, ಶಾರೂಕ್ ಹಷ್ಮಿ, ಅಣ್ಣೇಶ್, ಕಿರಣ, ಅವಿನಾಶ್, ಆನಂದ್, ರವಿ, ಬಸವರಾಜ್, ಪ್ರಶಾಂತ್, ಯತಿರಾಜ್, ನಾಗರಾಜ್, ಸಾವಂತ್, ಜಬೀವುಲ್ಲಾ, ಚಂದ್ರು, ಚಂದ್ರಶೇಖರ್ ಕೆ. ಗಣಪ, ಗೋಕುಲ್, ಸಾಗರ್, ನವೀನ್, ಚಿದಾನಂದ, ಸುನೀಲ್, ವಿಶ್ವಾಸ ಮತ್ತಿತರರು ಪಾಲ್ಗೊಂಡಿದ್ದರು.