SUDDIKSHANA KANNADA NEWS/ DAVANAGERE/ DATE:13-10-2024
ದಾವಣಗೆರೆ: ದಾವಣಗೆರೆ ಜಿಲ್ಲೆಯು ಈ ಹಿಂದೆ ದೊಡ್ಡ ಕೈಗಾರಿಕೆಗಳಿಗೆ ಪ್ರಸಿದ್ಧಿ ಹೊಂದಿತ್ತು. ಹತ್ತಿ, ಕಾಟನ್ ಮಿಲ್, ರೈಸ್ ಮಿಲ್ ಸೇರಿದಂತೆ ಹಲವು ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದವು. ಚಳ್ಳಕೆರೆಯಲ್ಲಿ ಎಣ್ಣೆ ಉತ್ಪಾದನೆ ಮಾಡುವ ಕೈಗಾರಿಕಗಳು ಇದ್ದವು. ವಾಣಿಜ್ಯ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ ಈ ಜಿಲ್ಲೆ ಶೈಕ್ಷಣಿಕವಾಗಿ ಬೆಳೆದಿದೆ. ಮೂಲಭೂತ ಸೌಲಭ್ಯಗಳಿದ್ದರೂ ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯಲ್ಲಿ ಕೈಗಾರಿಕೆಗಳು ಇಲ್ಲ. ಈ ಜಿಲ್ಲೆಯು ರಾಜ್ಯಕ್ಕೆ, ದೇಶಕ್ಕೆ ಜಿಡಿಪಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್. ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ತ್ರಿಶೂಲ್ ಕಲಾಭವನದಲ್ಲಿ ಏರ್ಪಡಿಸಿದ್ದ ದಿ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿಯಮಿತದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು
ವಾಣಿಜ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಜಿಲ್ಲೆಗಳಿಗೆ ಕಡಿಮೆ ಇಲ್ಲದಂತೆ ಬೆಳೆದಿದೆ. ಕೃಷಿ ಕ್ಷೇತ್ರದಲ್ಲಿಯೂ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದೆ ಎಂದರು.
ಈ ಬಾರಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬಿವೆ. ಎರಡು ಬೆಳೆಗಳನ್ನು ಬೆಳೆಯುವ ರೈತರು ಕಳೆದ ವರ್ಷ ಸಂಕಷ್ಟ ಅನುಭವಿಸಿದ್ದರು. ಆದ್ರೆ, ಈ ಬಾರಿ ಕೆಲವೆಡೆ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ನೆರೆ ಆಗಿ ರೈತ ವರ್ಗ ನೋವು ಅನುಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರ ರಾಜಕೀಯ ಹೊರತಾಗಿರಬೇಕು. ಆದ್ರೆ, ರಾಜಕೀಯ ಸೇರಿಕೊಂಡಿರುವ ಕಾರಣ ನಿರೀಕ್ಷಿತ ಮಟ್ಟದಲ್ಲಿ ಈ ಕ್ಷೇತ್ರ ಉನ್ನತಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಹೆಚ್. ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೋ ಆಪರೇಟಿವ್ ವಿಷಯಕ್ಕೆ ಬಂದಾಗ ಎಲ್ಲೋ ಒಂದು ಕಡೆ ಪ್ರಗತಿ ಕಾಣಲು ದೊಡ್ಡ ಮಟ್ಟದಲ್ಲಿ ಅವಕಾಶ ಇದ್ದರೂ ರಾಜಕೀಯ ಸೇರಿ ಹಾಳಾಗುತ್ತಿದೆ. ಸಹಕಾರ ಕ್ಷೇತ್ರದ ಬ್ಯಾಂಕ್ ಹಾಗೂ ಸೊಸೈಟಿ ಪರಿಸ್ಥಿತಿ ನೋಡಿದ್ದೇನೆ. ರಾಜಕೀಯ ಬಿಟ್ಟು ಜನರಿಗೆ ಒಳ್ಳೆಯದನ್ನು ಮಾಡಬೇಕೆಂದು ಹೊರಟರೆ ಸಹಕಾರ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳೆಯುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಸೇರಿದಂತೆ ಮತ್ತಿತರ ಸೌಲಭ್ಯ ಪಡೆಯಲು ಎಲ್ಲಾ ವರ್ಗದವರಿಗೂ ಆಗುವುದಿಲ್ಲ. ಬಡವರು, ಕೆಳವರ್ಗದವರಿಗೆ ಸಣ್ಣ ಬ್ಯಾಂಕ್ ಗಳಿಂದ ಸಾಕಷ್ಟು ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರದತ್ತ ಗಮನ ಹರಿಸಿದೆ. ಹಾಗಾಗಿ, ನರೇಂದ್ರ ಮೋದಿ ಅವರನ್ನು ಬ್ಯಾಂಕ್ ನ ಅಧ್ಯಕ್ಷ ಎನ್. ಎ. ಮುರುಗೇಶ್ ನೆನಪು ಮಾಡಿಕೊಂಡಿದ್ದಾರೆ. ಕೋ ಆಪರೇಟಿವ್ ಸೊಸೈಟಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಹೆಚ್ಚಿನ ಒತ್ತು ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದು ವರ್ಗದ ಜನರು ಸಾಲ ಕೇಳಲು ಹೋದರೆ ಪಡೆಯುವುದು ತುಂಬಾನೇ ಕಷ್ಟ. ಹಲವು ನಿಬಂಧನೆಗಳು ಮತ್ತು ಅಲ್ಲಿನ ವ್ಯವಸ್ಥೆಗಳೇ ಬೇರೆ ಇರುತ್ತವೆ. ಇಂಥ ಸಂದರ್ಭದಲ್ಲಿ ಅರ್ಬನ್ ಬ್ಯಾಂಕ್ ಗಳು ಅವಶ್ಯಕ. ದೇಶದ ಜಿಡಿಪಿಗೆ ನೀಡಿರುವ ಕೊಡುಗೆ ಮರೆಯುವಂತಿಲ್ಲ ಎಂದು ಹೇಳಿದರು.
ಖಾಸಗಿ ವಲಯದಲ್ಲಿ ಬ್ಯಾಂಕ್ ನಡೆಸುವುದು ಕಷ್ಟ. ಸಣ್ಣ ತಪ್ಪು ಆದರೂ ಮತ್ತೆ ಚೇತರಿಸಿಕೊಳ್ಳಲು ಆಗದಂಥ ಪರಿಸ್ಥಿತಿ ಇದೆ. 1972ರಲ್ಲಿ ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಪ್ರಾರಂಭವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿರುವುದು ಸಂತಸದ ವಿಚಾರ. ಆರಾಧ್ಯ ಮತ್ತು ಕೊಟ್ರುಬಸಪ್ಪನವರು ಹಲವಾರು ಸದಸ್ಯರನ್ನು ಸೇರಿಕೊಂಡು ಬ್ಯಾಂಕ್ ಕಟ್ಟಿದ್ದಾರೆ. ಅಡಚಣೆ, ಅನುಮಾನ ಇದ್ದರೂ ನಿರುತ್ಸಾಹ ಇದ್ದರೂ ಧೈರ್ಯದಿಂದ ಕಟ್ಟಿ ಬೆಳೆಸಿದ್ದಾರೆ. 1982ರಲ್ಲಿ 80 ಸಾವಿರ ಷೇರು ಹೊಂದಿದ್ದ ಈ ಬ್ಯಾಂಕ್ 274 ರೂಪಾಯಿ ಮೊದಲನೇ ವರ್ಷದ ಲಾಭ ಪಡೆದಿತ್ತು. ಸುಮಾರು 12 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಈಗ ಒಳಗೊಂಡಿದೆ. 2024ರಲ್ಲಿ ಬ್ಯಾಂಕ್ 5 ಕೋಟಿ 65 ಲಕ್ಷ ರೂಪಾಯಿ ಲಾಭಾಂಶ ಪಡೆದಿರುವುದು ಅತ್ಯುತ್ತಮ ಸಾಧನೆ. 287 ಕೋಟಿ ರೂಪಾಯಿ ಹಣವನ್ನು ಗ್ರಾಹಕರಿಗೆ ಸಾಲ ನೀಡಿ ಹಲವಾರು ಕುಟುಂಬಗಳ ನಿರ್ವಹಣೆಗೆ ದೊಡ್ಡ ಮಟ್ಟದ ಕೊಡುಗೆ ನೀಡಿದೆ. ಅಧ್ಯಕ್ಷರು, ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಬ್ಯಾಂಕ್ ಅಧ್ಯಕ್ಷ ಮುರುಗೇಶ್ ಮಾತನಾಡಿ, ಕರ್ನಾಟಕದಲ್ಲಿ ಅರ್ಬನ್ ಬ್ಯಾಂಕ್ ಗಳಲ್ಲಿ 40 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರ ಚಳವಳಿ ದೊಡ್ಡ ಕ್ರಾಂತಿ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. 120 ವರ್ಷ ಈ ಚಳವಳಿಗೆ ತುಂಬಿದೆ. ಪಟ್ಟಣ ಸಹಕಾರ ಬ್ಯಾಂಕ್ ಪಾತ್ರ ದೊಡ್ಡದು. ಆರ್ಥಿಕ ಬೆಳವಣಿಗೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕ್ ಗಳ ಪಾಲುದಾರಿಕೆ ಹೆಚ್ಚಾಗಿದೆ. ಭಾರತದಲ್ಲಿ 1514 ಸಹಕಾರ ಪಟ್ಟಣ ಸಹಕಾರ ಬ್ಯಾಂಕ್ ಗಳಿವೆ. ಅವೆಲ್ಲವೂ ಕಾರ್ಯಾಚರಣೆ ಮಾಡುತ್ತಿವೆ. ಗುಜರಾತ್ ಮೊದಲ ಸ್ಥಾನ, ಮಹಾರಾಷ್ಟ್ರ ದ್ವಿತೀಯ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಉಜ್ಜಯಿನಿ ಮಹಾಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರು ಸಾನಿಧ್ಯ ವಹಿಸಿದ್ದರು. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ, ಶಾಸಕ ಬಿ. ಪಿ. ಹರೀಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಕೆ. ಎಸ್. ನವೀನ್, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಮತ್ತಿತರರು
ಹಾಜರಿದ್ದರು.