ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಶನಿವಾರ ರಾತ್ರಿ ರಾಸ್ ಗಾರ್ಬಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬಿಜೆಪಿ ಮಹಿಳಾ ಮಹಾನಗರ ಪಾಲಿಕೆ ಕೌನ್ಸಿಲರ್ ಮತ್ತು ಅವರ ಕುಟುಂಬದ ಮೇಲೆ ದುಷ್ಕರ್ಮಿಗಳು ದೌರ್ಜನ್ಯ ಎಸಗಿ, ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಸಂತ್ರಸ್ತ ಕುಟುಂಬವು ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇಸನ್‌ಪುರದಿಂದ ಗೂಗಲ್ ಮ್ಯಾಪ್ ಸಹಾಯದೊಂದಿಗೆ ಗಾರ್ಬಾ ಸ್ಥಳಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಫತೇವಾಡಿ ಕಾಲುವೆ ಬಳಿ ದಾರಿ ಬಿಡುವ ವಿಚಾರವಾಗಿ ಕಾರು ಚಾಲಕ ಶೋಯೆಬ್ ಶಾ ಫಕೀರ್ ಎಂಬಾತನೊಂದಿಗೆ ಗಲಾಟೆ ಶುರುವಾಗಿತ್ತು. ಸ್ಥಳದಲ್ಲಿದ್ದ ಜನರು ಗಲಾಟೆಯನ್ನು ತಿಳಿಗೊಳಿಸಿದ ನಂತರ ಕುಟುಂಬವು ಪ್ರಯಾಣ ಮುಂದುವರಿಸಿತ್ತು. ಆದರೆ, ಸರ್ಖೇಜ್ ಬಳಿ ಆರೋಪಿಗಳು ಮತ್ತೆ ಕಾರನ್ನು ತಡೆದು ನಿಲ್ಲಿಸಿ, ಗಲಾಟೆ ಆರಂಭಿಸಿದ್ದಾರೆ.
ಕಾರಿನಿಂದ ಎಳೆಯಲು ಯತ್ನ: ಮಹಿಳಾ ಕೌನ್ಸಿಲರ್ ಸಂಭಾಷಣೆಗೆ ಕಾರಿನ ಗ್ಲಾಸ್ ಕೆಳಗಿಳಿಸಿದಾಗ, ಆರೋಪಿಗಳು ಅವರ ಕೈ ಹಿಡಿದು ಬಲವಂತವಾಗಿ ಹೊರಗೆ ಎಳೆಯಲು ಯತ್ನಿಸಿದ್ದಾರೆ.
ವಾಹನ ಜಖಂ: ಆರೋಪಿಗಳು ಕಾರಿನ ಕಿಟಕಿ ಒಡೆಯಲು ಹಾಗೂ ಬಾಗಿಲು ತೆರೆಯಲು ಯತ್ನಿಸಿದ್ದು, ಘಟನೆಯಲ್ಲಿ ಕಾರಿನ ಸೈಡ್ ಮಿರರ್ ಹಾನಿಗೊಳಗಾಗಿದೆ.
ಪೊಲೀಸ್ ಕ್ರಮ: ತುರ್ತು ಕರೆ 112 ಬಂದ ತಕ್ಷಣ ಸ್ಥಳಕ್ಕೆ ಆಗಮಿಸಿದ ವೆಜಾಲ್ಪುರ್ ಪೊಲೀಸರು ದೂರು ದಾಖಲಿಸಿಕೊಂಡು, ಪ್ರಮುಖ ಆರೋಪಿ ಶೋಯೆಬ್ ಶಾ ಫಕೀರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಸಂತ್ರಸ್ತರ ದೂರಿನನ್ವಯ ಲೈಂಗಿಕ ಕಿರುಕುಳ, ಹಲ್ಲೆ ಹಾಗೂ ಅಶ್ಲೀಲ ವರ್ತನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಎ.ಬಿ. ವಾಲಂಡ್ ತಿಳಿಸಿದ್ದಾರೆ.





Leave a comment