ಕಾಸಗಂಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆಯಲ್ಲಿ ಅತ್ಯಂತ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ಒಂದೂವರೆ ತಿಂಗಳ ಮುದ್ದು ಗಂಡು ಮಗುವನ್ನು ಹಣಕ್ಕಾಗಿ ಅನ್ಯರಿಗೆ ಮಾರಾಟ ಮಾಡಿ, ಬಳಿಕ ಮಗು ನಾಪತ್ತೆಯಾಗಿದೆ ಎಂದು ಕಟ್ಟುಕಥೆ ಕಟ್ಟಿ ಪೊಲೀಸರನ್ನು ಹಾಗೂ ಕುಟುಂಬಸ್ಥರನ್ನು ನಂಬಿಸಲು ಯತ್ನಿಸಿದ್ದ ಸ್ವತಃ ಕಡೆ ತಾಯಿಯ ವಂಚನೆ ಬಯಲಾಗಿದೆ.
ಈ ದೌರ್ಜನ್ಯ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ, ಕೃತ್ಯಕ್ಕೆ ಸಾಥ್ ನೀಡಿದ ವೈದ್ಯ ಹಾಗೂ ಮಗುವನ್ನು ಖರೀದಿಸಿದ ದಂಪತಿ ಸೇರಿದಂತೆ ಒಟ್ಟು ಐವರನ್ನು ಸೋರಾನ್ ಠಾಣಾ ಪೊಲೀಸರು ಹಾಗೂ ವಿಶೇಷ ಕಾರ್ಯಾಚರಣೆ ಪಡೆ (SOG) ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಶನಿವಾರ ಬಂಧಿಸಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ, ಕಾಸಗಂಜ್ನ ಬಾನುಪುರ ಪುಖ್ತಾ ಗ್ರಾಮದ ನಿವಾಸಿ ಮತ್ತು ಫರೀದಾಬಾದ್ನ ಖಾಸಗಿ ‘ಸೋನ್ಪಾಪ್ಡಿ’ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿರುವ ಅರವಿಂದ್ ಎಂಬುವರು ತಮ್ಮ ಮಗು ಕಾಣೆಯಾಗಿದೆ ಎಂದು ಅಕ್ಟೋಬರ್ 17 ರಂದು ದೂರು ನೀಡಿದ್ದರು. ದೂರುದಾರ ಅರವಿಂದ್ ಅವರ ಪತ್ನಿ ಅಕ್ಟೋಬರ್ 16 ರಂದು ಮಗುವಿಗೆ ಔಷಧ ತರಲೆಂದು ಕಾಸಗಂಜ್ಗೆ ತೆರಳಿದ್ದರು.
ಈ ವೇಳೆ ಬಸ್ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯೊಬ್ಬರ ಹತ್ತಿರ ಮಗುವನ್ನಿಟ್ಟು ತಾನು ಶೌಚಾಲಯಕ್ಕೆ ಹೋಗಿ ಬರುವುದಾಗಿ ತೆರಳಿದ್ದಳು. ಆದರೆ ವಾಪಸ್ ಬಂದು ನೋಡುವಷ್ಟರಲ್ಲಿ ಮಗುವೂ ಇಲ್ಲ, ಆ ಮಹಿಳೆಯೂ ಇಲ್ಲ ಎಂದು ಪತಿಗೆ ಸುಳ್ಳು ಕಥೆ ಹೇಳಿ ಗೋಳಾಡಿದ್ದಳು. ಆದರೆ ತನಿಖೆ ಮುಂದುವರೆದಂತೆ ಆಕೆಯ ಕಪಟ ನಾಟಕದ ಕರಾಳ ಮುಖ ಹೊರಬಿದ್ದಿದೆ.
ಮಾರಾಟದ ಡೀಲ್ ಮತ್ತು ಹಣಕಾಸು: ತಾಯಿ ಸ್ವತಃ ಡಾ. ಅರುಣ್ ಕುಮಾರ್ ಹಾಗೂ ಅವರ ಪತ್ನಿಯ ಜೊತೆ ಸೇರಿಕೊಂಡು ಸಂಚು ನಡೆಸಿ ಮಗುವನ್ನು ಮಾರಾಟ ಮಾಡಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಒಪ್ಪಂದದ ಭಾಗವಾಗಿ ತಾಯಿಗೆ ಒಟ್ಟು 1.30 ಲಕ್ಷ ರೂಪಾಯಿ ದೊರೆತಿದ್ದು, ಇದರಲ್ಲಿ 1.20 ಲಕ್ಷ ರೂ. ನೇರವಾಗಿ ಆಕೆಯ ಬ್ಯಾಂಕ್ ಖಾತೆಗೆ ಜಮೆಯಾಗಿದ್ದರೆ, 10,000 ರೂ. ನಗದಾಗಿ ಪಡೆದಿದ್ದಾಳೆ.
ಖರೀದಿದಾರರ ಮಾಹಿತಿ: ಹಾಥರಸ್ ಜಿಲ್ಲೆಯ ಮಾಹಿಪಾಲ್ ಹಾಗೂ ಅವರ ಪತ್ನಿ ಈ ದಲ್ಲಾಳಿ ವೈದ್ಯ ದಂಪತಿಗಳ ಮೂಲಕ ತಾಯಿಯ ಒಪ್ಪಿಗೆಯ ಮೇರೆಗೆ ಬರೋಬ್ಬರಿ 2 ಲಕ್ಷ ರೂಪಾಯಿ ನೀಡಿ ಈ ಹಸುಗೂಸನ್ನು ಖರೀದಿಸಿರುವುದು ವಿಚಾರಣೆ ವೇಳೆ ದೃಢಪಟ್ಟಿದೆ.
ಮಗುವಿನ ಸುರಕ್ಷಿತ ರಕ್ಷಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಒ.ಪಿ. ಸಿಂಗ್ ಅವರ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಸೋರಾನ್ ಪೊಲೀಸರು ಹಾಗೂ SOG ತಂಡವು ಚಂದ್ಪುರ-ಗೌಪುರ ಕಟ್ ಬಳಿಯ ಪ್ರಯಾಣಿಕರ ತಂಗುದಾಣದಲ್ಲಿ ದಾಳಿ ನಡೆಸಿ ಐವರ ಆರೋಪಿಗಳನ್ನು ಬಂಧಿಸಿದ್ದು, ಕೇವಲ ಒಂದೂವರೆ ತಿಂಗಳ ಹಸುಗೂಸನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಬಾಲನ್ಯಾಯ ಕಾಯ್ದೆಯಡಿ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಸುಗೂಸುಗಳ ಮೇಲಿನ ಇಂತಹ ದೌರ್ಜನ್ಯ ಮತ್ತು ಹಣಕ್ಕಾಗಿ ಮಕ್ಕಳನ್ನು ಮಾರಾಟ ಮಾಡುವ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.





Leave a comment