SUDDIKSHANA KANNADA NEWS/ DAVANAGERE/ DATE:06-03-2024
ದಾವಣಗೆರೆ: ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಧಾರಣೆ ಮತ್ತೆ ಏರು ಮುಖದತ್ತ ಸಾಗಿದೆ. ಕೇವಲ 50, 100, 200 ರೂಪಾಯಿ ಏರಿಕೆ ಕಾಣುತ್ತಿದ್ದ ಅಡಿಕೆ ಧಾರಣೆಯು ಈಗ 500 ರೂಪಾಯಿಯಷ್ಟು ಏರಿಕೆಯಾಗಿದ್ದು, ರೈತರಲ್ಲಿ ಸ್ವಲ್ಪ ಖುಷಿ ತಂದಿದೆ. ಕಳೆದ ಹದಿನೈದು ದಿನಗಳ ಹಿಂದೆ 2300 ರೂಪಾಯಿ ಪ್ರತಿ ಕ್ವಿಂಟಲ್ ಗೆ ಅಡಿಕೆ ಧಾರಣೆ ಕುಸಿತ ಕಂಡಿತ್ತು. 50 ಸಾವಿರ ರೂಪಾಯಿ ಗಡಿ ಒಮ್ಮೆ ದಾಟಿದ್ದು ಬಿಟ್ಟರೆ ಮತ್ತೆ ಕುಸಿಯುತ್ತಾ ಸಾಗಿತ್ತು. ಇದು ರೈತರ ಆತಂಕಕ್ಕೂ ಕಾರಣವಾಗಿತ್ತು.
ಈ ವರ್ಷದ ಆರಂಭದಲ್ಲಿ ಅಡಿಕೆ ಧಾರಣೆಯು ಏರುಮುಖದಲ್ಲಿ ಸಾಗುತ್ತಿದ್ದ ಕಾರಣ ಅಡಿಕೆ ಧಾರಣೆಯು 60 ಸಾವಿರ ಗಡಿ ಮುಟ್ಟುತ್ತದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಅದೆಲ್ಲಾ ಹುಸಿಯಾಗಿತ್ತು. ವರ್ಷದ ಕೊನೆಯಲ್ಲಿ
ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಅಡಿಕೆ ರೇಟ್ ಜನವರಿ ತಿಂಗಳಿನಲ್ಲಿಯೂ ಏರುಮುಖದತ್ತವೇ ಸಾಗಿತ್ತು. ಆದ್ರೆ, ಕೊನೆ ವಾರದಲ್ಲಿ ಮತ್ತೆ ಕುಸಿಯಲಾರಂಭಿಸಿತು. ಆರಂಭದಲ್ಲಿ 500 ರೂಪಾಯಿ ಕುಸಿದರೆ, ಇದ್ದಕ್ಕಿದ್ದಂತೆ ಒಮ್ಮೆಲೆ 2300 ರೂಪಾಯಿಯಷ್ಟು ಕುಸಿತ ಕಂಡು ರೈತರ ಆತಂಕ ಹೆಚ್ಚಾಗುವಂತೆ ಮಾಡಿತ್ತು.
ಕಳೆದ ಹತ್ತು ದಿನಗಳ ಹಿಂದೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ ಅಡಿಕೆ ಧಾರಣೆಯು ಬುಧವಾರ 500 ರೂಪಾಯಿಯಷ್ಟು ಏರಿಕೆ ಆಗಿದ್ದು ರೈತರಲ್ಲಿ ಸ್ವಲ್ಪ ಖುಷಿ ತಂದಿದೆ. ಮಾತ್ರವಲ್ಲ, ಕಳೆದೊಂದು ವಾರದಿಂದಲೂ ಏರುಮುಖದಲ್ಲಿಯೇ ಸಾಗಿದೆ. ಒಮ್ಮೆಯೂ ಕುಸಿತ ಕಂಡಿಲ್ಲ.
ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಪ್ರತಿ ಕ್ವಿಂಟಲ್ ಅಡಿಕೆಗೆ ಧಾರಣೆ ಸಿಕ್ಕಿತ್ತು. ಈ ವೇಳೆ ಕೆಲವರು ಮಾತ್ರ ಅಡಿಕೆ ಮಾರುಕಟ್ಟೆಗೆ ಬಿಟ್ಟಿದ್ದರು. ಆದ್ರೆ, ಬಹುತೇಕರು ಮತ್ತೆ ಅಡಿಕೆ ಧಾರಣೆ ಹೆಚ್ಚಾಗಬಹುದು ಎಂಬ ಆಸೆಯಿಂದ ಮನೆಯಲ್ಲಿಯೇ ಸಂಗ್ರಹಿಸಿಟ್ಟಿದ್ದರು. ಮತ್ತೆ ಇದ್ದಕ್ಕಿದ್ದಂತೆ 9 ಸಾವಿರ ರೂಪಾಯಿ ಕಡಿಮೆಯಾಗಿತ್ತು. ಆಗಲೂ ಅಡಿಕೆ ಬಿಟ್ಟಿರಲಿಲ್ಲ. ಈ ವರ್ಷದ ಆರಂಭದಲ್ಲಿ ಅಡಿಕೆ ಧಾರಣೆ ಏರಿಕೆ ಕಂಡಿದ್ದರಿಂದ 60 ಸಾವಿರ ರೂಪಾಯಿ ಗಡಿ ಮುಟ್ಟುತ್ತದೆ ಎಂಬ ನಿರೀಕ್ಷೆಯೂ ಈಗ ಇಲ್ಲ. ಯಾಕೆಂದರೆ ಅಡಿಕೆ ಧಾರಣೆಯು 50 ಸಾವಿರ ರೂಪಾಯಿಯ ಗಡಿಯೇ ದಾಟುತ್ತಿಲ್ಲ,
ಚನ್ನಗಿರಿ ಅಡಿಕೆ ಮಾರುಕಟ್ಟೆ ವಹಿವಾಟಿನಲ್ಲಿ ಪ್ರತಿ ಕ್ವಿಂಟಲ್ ಅಡಿಕೆ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಉತ್ತಮ ರಾಶಿ ಅಡಿಕೆಯು ಕನಿಷ್ಠ ಬೆಲೆ 46,819 ರೂಪಾಯಿ ದಾಖಲಿಸಿದೆ. ಗರಿಷ್ಠ ಬೆಲೆ 48,839 ರೂಪಾಯಿ ಆಗಿದ್ದರೆ ಸರಾಸರಿ ಬೆಲೆ 47,912 ರೂಪಾಯಿ ಆಗಿದೆ. ಬೆಟ್ಟೆ ಅಡಿಕೆ ಗರಿಷ್ಠ 32,820 ರೂಪಾಯಿ ವಹಿವಾಟು ಮುಗಿಸಿದೆ. ಮುಂದಿನ ದಿನಗಳಲ್ಲಿ ಏರಿಕೆಯಾಗುತ್ತೋ ಅಥವಾ ಕುಂಠಿತವಾಗುತ್ತೋ ಎಂಬ ಭಯವೂ ಕಾಡುತ್ತಿದೆ.
ಸುಡುತ್ತಿದೆ ಬಿಸಿಲು:
ಇನ್ನು ಅಡಿಕೆ ಧಾರಣೆಯು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡರೂ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರಾ ನಾಲೆಯ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಸಿಗುತ್ತಿಲ್ಲ. ಚನ್ನಗಿರಿ ತಾಲೂಕಿನ ಕೆಲ ಭಾಗಗಳಿಗೆ ಮಾತ್ರ ನೀರು ಸಿಗುತ್ತಿದೆ. ಉಳಿದಂತೆ ಬೋರ್ ವೆಲ್ ನೀರು ಅವಲಂಬಿಸಬೇಕಾಗಿದೆ. ಆದ್ರೆ, ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಹಾಗಾಗಿ, ತೋಟಗಳಿಗೆ ನೀರುಣಿಸುವುದು ದುಸ್ತರವಾಗಿದೆ.
ಬಂದ ಹಣವೆಲ್ಲಾ ನೀರಿಗೆ:
ಈ ವರ್ಷ ಅಡಿಕೆ ಮಾರಾಟ ಮಾಡಿ ಬಂದ ಹಣವೆಲ್ಲವೂ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಹೋಗುತ್ತಿದೆ. ಯಾಕೆಂದರೆ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಬೋರ್ ವೆಲ್ ಗಳು ಕೈ ಕೊಡುತ್ತಿವೆ. ಜೊತೆಗೆ ಟ್ಯಾಂಕರ್ ಗಳ ಮೂಲಕ ನೀರು ದುಬಾರಿಯಾಗಿದೆ. ಜಿಲ್ಲಾಡಳಿತವು ಪಂಪ್ ಸೆಟ್ ಗಳ ತೆರವು ಕಾರ್ಯಾಚರಣೆ ಬಿಗಿ ಮಾಡಿರುವುದರಿಂದ ಅಕ್ರಮವಾಗಿ ನೀರು ಪಡೆಯಲು ಆಗುತ್ತಿಲ್ಲ. ಬೇರೆ ಕಡೆಗಳಿಂದ ನೀರು ತಂದು ಗಿಡಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂಪಾಯಿ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಚನ್ನಗಿರಿ ತಾಲೂಕಿನಲ್ಲಿ ಸೂಳೆಕೆರೆ ಇದೆ. ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ. ಆದ್ರೆ, ಈ ನೀರು ನಮಗೆ ಸಿಗುತ್ತಿಲ್ಲ. ಭದ್ರಾ ಜಲಾಶಯದಿಂದ ಬರುವ ನೀರು ಸಹ ಸರಿಯಾಗಿ ನಮಗೆ ಸಿಗುತ್ತಿಲ್ಲ. ಕೆಲ ಪ್ರದೇಶಗಳಿಗೆ ಮಾತ್ರ ಸಿಗುತ್ತಿದೆ. ಇದರಿಂದಾಗಿ ನಾವೆಲ್ಲಾ ಬೋರ್ ವೆಲ್ ನೀರು ಮಾತ್ರ ಅವಲಂಬಿಸಿದ್ದೇವೆ. ಈಗ ನೀರಿಲ್ಲ. ದುಡ್ಡು ಕೊಡ್ತೇವೆ ಎಂದರೂ ಸಿಗುತ್ತಿಲ್ಲ. ಹಾಗಾಗಿ, ಬಿಸಿಲಿನ ಧಗೆ ಹೆಚ್ಚಾದರೆ, ಮುಂಗಾರು ಮಳೆ ಸರಿಯಾಗಿ ಬಾರದಿದ್ದರೆ ಅಡಿಕೆ ಗಿಡಗಳು ಒಣಗಿ ಹೋಗಿ ತೋಟಗಳನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿ ಇದ್ದೇವೆ. ಸರ್ಕಾರ ನೀಡುವ ಪರಿಹಾರ ಹಣವೂ ಯಾತಕ್ಕೂ ಸಾಕಾಗಲ್ಲ. ಹಾಗಾಗಿ, ನೀರು ನೀಡುವ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗ ಚನ್ನಗಿರಿ ತಾಲೂಕಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.