ದಾವಣಗೆರೆ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ವಿರುದ್ಧ ನಿಂದನಾತ್ಮಕ ಹಾಗೂ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿರುವ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟಿಸಿ ತಕ್ಕ ಉತ್ತರ ಕೊಡಲಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ತಾನೊಬ್ಬ ಶಾಸಕ ಎಂಬುದನ್ನು ಮರೆತಿದ್ದಾರೆ. ಏನು ಮಾತನಾಡಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲ. ಬಿಜೆಪಿ ಪಕ್ಷ ಉಚ್ಚಾಟನೆ ಮಾಡಿದ ಮೇಲೆ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ವಿರುದ್ಧ ಮಾತನಾಡಿದರೆ ದೊಡ್ಡ ನಾಯಕನಾಗಿಬಿಡುತ್ತೇನೆಂಬ ಭ್ರಮೆಯಲ್ಲಿದ್ದಾರೆ. ಇಂಥ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ದ್ರೋಹ ಮಾಡಿದ್ದರಿಂದಲೇ ಬಿಜೆಪಿ ಪಕ್ಷ ಶಾಸಕ ಸ್ಥಾನದಲ್ಲಿದ್ದರೂ ಉಚ್ಚಾಟಿಸಿದೆ. ಇವರ ಯೋಗ್ಯತೆ ಹೇಳಲು ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿ. ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿದ್ದ ಯತ್ನಾಳ್ ಯಾಕೆ ದೂರು ಕೊಟ್ಟಿಲ್ಲ, ಕಾನೂನು ಹೋರಾಟ ಯಾಕೆ ನಡೆಸಿಲ್ಲ. ಇನ್ನು ಮುಂದೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ಪ್ರಚೋದಾನಾತ್ಮಕ, ನಿಂದನಾತ್ಮಕ ಹಾಗೂ ಆಧಾರ ರಹಿತ ಆರೋಪ ಮಾಡಿರುವ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ದೇಶದ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕ ಹಾಗೂ ಗಾಂಧಿ ಕುಟುಂಬದ ಕುರಿತು ಕೀಳುಮಟ್ಟದ ಭಾಷೆ ಬಳಸಿ ತೇಜೋವಧೆ ಮಾಡಿರುವ ಯತ್ನಾಳ್ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಯತ್ನಾಳ್ ಅವರ ಹೇಳಿಕೆಯು ಅವರ ಸಂಸ್ಕೃತಿಯ ಸಂಕೇತ. ಯತ್ನಾಳ್ ಇಂತಹ ಅಸಂಸದೀಯ ಮತ್ತು ಕೀಳುಮಟ್ಟದ ಆರೋಪ ಮಾಡಿರುವುದನ್ನು ನೋಡಿದರೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೂಡಲೇ ಬೇಷರತ್ ಆಗಿ ಕ್ಷಮೆಯಾಚಿಸಬೇಕು ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಒತ್ತಾಯಿಸಿದ್ದಾರೆ.





Leave a comment