ನವದೆಹಲಿ: ಭಾರತೀಯರಲ್ಲಿ ಚಿನ್ನದ ಮೇಲಿರುವ ಪ್ರೀತಿ ಜಗತ್ಪ್ರಸಿದ್ಧ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಕಾಣುತ್ತಿರುವುದರಿಂದ, ದೇಶದ ಗ್ರಾಹಕರು ಈಗ ಒಂದು ಮಹತ್ವದ ನಿರ್ಧಾರಕ್ಕೆ ಕೈಹಾಕಿದ್ದಾರೆ.
ಇತ್ತೀಚೆಗೆ ದಾಖಲೆಯ ಮಟ್ಟ ಮುಟ್ಟಿದ್ದ ಚಿನ್ನದ ಬೆಲೆ ಈಗ ದಿಢೀರನೆ ಕುಸಿಯಲಾರಂಭಿಸಿದೆ. ಇದರಿಂದಾಗಿ ಇನ್ನು ಮುಂದೆ ಬೆಲೆ ಮತ್ತಷ್ಟು ಕುಸಿಯಬಹುದು ಎಂಬ ಭೀತಿಯಿಂದ ಭಾರತೀಯ ಕುಟುಂಬಗಳು ತಮ್ಮಲ್ಲಿರುವ ಹಳೆಯ ಚಿನ್ನದ ಆಭರಣಗಳನ್ನು ಮಾರಿ ನಗದು ಮಾಡಿಕೊಳ್ಳಲು ಮುಗಿಬೀಳುತ್ತಿದ್ದಾರೆ.
43% ಹೆಚ್ಚಿದ ಹಳೇ ಚಿನ್ನದ ಮಾರಾಟ:
ಭಾರತೀಯ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ನೀಡಿರುವ ಮಾಹಿತಿ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತೀಯರು ಬರೋಬ್ಬರಿ 50 ಟನ್ ಹಳೆಯ ಚಿನ್ನವನ್ನು ಮಾರಾಟ ಮಾಡಿದ್ದಾರೆ.
ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 43 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1.44 ಲಕ್ಷದ ಆಸುಪಾಸಿನಲ್ಲಿದ್ದು, ಇದು ಮುಂದಿನ ದಿನಗಳಲ್ಲಿ ₹1.20 ಲಕ್ಷಕ್ಕೆ ಇಳಿಯಬಹುದು ಎಂಬ ಮುನ್ಸೂಚನೆ ಇರುವುದರಿಂದ ಜನರು ಹೊಸ ಒಡವೆಗೆ ಎಕ್ಸ್ಚೇಂಜ್ ಮಾಡಿಕೊಳ್ಳುವ ಬದಲು, ನೇರವಾಗಿ ನಗದು ಹಣ ಪಡೆಯಲು ಇಷ್ಟಪಡುತ್ತಿದ್ದಾರೆ.
ಜಾಗತಿಕ ಮಾರುಕಟ್ಟೆಯ ಒತ್ತಡ:
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವ ಮುನ್ಸೂಚನೆ ನೀಡಿರುವುದು ಮತ್ತು ಜಾಗತಿಕ ರಾಜಕೀಯ ವಿದ್ಯಮಾನಗಳಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಮೇಲೆ ಒತ್ತಡ ಹೆಚ್ಚಾಗಿದೆ.
ಬಡ್ಡಿದರ ಹೆಚ್ಚಾದಾಗ ಹೂಡಿಕೆದಾರರು ಚಿನ್ನದ ಬದಲು ಬಾಂಡ್‌ಗಳತ್ತ ಮುಖ ಮಾಡುವುದರಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ.
ಭಾರತದ ಆರ್ಥಿಕತೆಗೆ ಹೇಗೆ ಲಾಭ? ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನ ಬಳಸುವ ದೇಶವಾಗಿದ್ದರೂ, ತನ್ನ ಬಹುತೇಕ ಚಿನ್ನವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆರ್ಥಿಕ ವರ್ಷ 2026 ರಲ್ಲಿ ಭಾರತವು ಸುಮಾರು 72.4 ಬಿಲಿಯನ್ ಡಾಲರ್ ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ.
ಆದರೆ ಈಗ ಜನರು ಹಳೇ ಚಿನ್ನವನ್ನು ಹೆಚ್ಚಾಗಿ ಮಾರುತ್ತಿರುವುದರಿಂದ ‘ಗೋಲ್ಡ್ ರಿಸೈಕ್ಲಿಂಗ್’ (ಮರುಬಳಕೆ) ಉದ್ಯಮಕ್ಕೆ ಭಾರಿ ಲಾಭವಾಗಿದೆ. ದೇಶದ ಲಾಕರ್‌ಗಳಲ್ಲಿ ಅಂದಾಜು 30,000 ಟನ್ ಚಿನ್ನವಿದ್ದು, ಇದನ್ನು ಮರುಬಳಕೆ ಮಾಡುವುದರಿಂದ ಭಾರತವು ವಿದೇಶಗಳ ಮೇಲಿನ ಆಮದು ಅವಲಂಬನೆಯನ್ನು ತಗ್ಗಿಸಬಹುದಾಗಿದೆ.





Leave a comment