SUDDIKSHANA KANNADA NEWS/ DAVANAGERE/ DATE:14-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದ ಭಿನ್ನಮತೀಯರು ಸಭೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವ ಕುರಿತಂತೆಯೂ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರುತ್ತೇವೆ ಎಂಬ ಗುಟುರು ಹಾಕಲಾಗಿದೆ.
ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿಯಲ್ಲಿನ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಮನೆಯಲ್ಲಿ ಸಭೆ ಸೇರಿದ್ದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಗುರುಸಿದ್ದನಗೌಡ್ರು, ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಪರಾಜಿತರಾದ ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಬಸವರಾಜ ನಾಯ್ಕ, ಮಾಡಾಳ್ ಮಲ್ಲಿಕಾರ್ಜುನ್, ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು. ಎಸ್. ಎ. ರವೀಂದ್ರನಾಥ್ ಉಪಸ್ಥಿತಿಯಲ್ಲಿ ಹಲವು ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ ಅವರು ಸಂಸದ ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ಸೇರಿದ್ದೇವೆ. ಈಗ ಘೋಷಿಸಿರುವ ಅಭ್ಯರ್ಥಿಯನ್ನು ಬದಲಾವಣೆ ಮಾಡಲೇಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ ಅವರು ಸಂಘಟನೆ ನೀಡಿರುವ ಕೊಡುಗೆ ಶೂನ್ಯ, ಅಭಿವೃದ್ಧಿಯೂ ಶೂನ್ಯ. ಎಲ್ಲವನ್ನೂ ಸ್ವಂತಕ್ಕೋಸ್ಕರ ಮಾಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಅವರೇ ಕಾರಣ. ಯಾವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿಲ್ಲ. ಎಲ್ಲಿಯೂ ಬಿರುಸಿನ ಪ್ರಚಾರ ಮಾಡಿಲ್ಲ. ಕೇವಲ ನಾಲ್ಕರಿಂದ ಐದು ತಾಸು ಅಷ್ಟೇ ಪ್ರಚಾರ ನಡೆಸಿದ್ದಾರೆ. ನಾವೆಲ್ಲರೂ ಸೋಲಲು ಸಿದ್ದೇಶ್ವರ ಅವರೇ ಕಾರಣ ಎಂದು ವಾಗ್ಪ್ರಾಹಾರ ನಡೆಸಿದರು.
ಸಿದ್ದೇಶ್ವರರ ಕುಟುಂಬ ಯಾವಾಗ ಬಿಜೆಪಿ ಬಾವುಟ ಕಟ್ಟಿದೆ, ಯಾವಾಗ ಧ್ವಜ ಕಟ್ಟಿದೆ. ಬಿಜೆಪಿ ಪಕ್ಷಕ್ಕೆ ನೀಡಿರುವ ಕೊಡುಗೆ ಶೂನ್ಯ. ಚಿತ್ರದುರ್ಗ – ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದು ಎಸ್. ಎ. ರವೀಂದ್ರನಾಥ್ ನೇತೃತ್ವದ ತಂಡ. ನಾವೆಲ್ಲರೂ
ಸೇರಿ ಪಕ್ಷ ಬಲಿಷ್ಠಗೊಳಿಸಿದ್ದೇವೆ. ಸಿದ್ದೇಶ್ವರ ಏನೂ ಬಿಜೆಪಿ ಕಟ್ಟಿ ಬೆಳೆಸಿದ್ದೀರಾ, ಹೋರಾಟ ಮಾಡಿದ್ದಾರಾ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.
ಈಗ ಘೋಷಿಸಿರುವ ಅಭ್ಯರ್ಥಿಗೆ ನಮ್ಮ ಬೆಂಬಲ ಇಲ್ಲ. ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದೇವೆ. ಯಾರಿಗೂ ನೀಡಿಲ್ಲ. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ದೆಹಲಿ ಪ್ರಮುಖ ನಾಯಕರು ಸೇರಿದಂತೆ ಎಲ್ಲರನ್ನೂ
ಭೇಟಿ ಮಾಡಿ ಮನವಿ ಮಾಡಿದ್ದರೂ ಸಿದ್ದೇಶ್ವರರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಮತ್ತೆ ಸಭೆ ಸೇರಿ ಪಕ್ಷೇತರರಾಗಿ ಕಣಕ್ಕಿಳಿಯಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಹತ್ತು ಸಾವಿರ ಜನರನ್ನು ಸೇರಿಸಿ ನಿರ್ಧಾರ ಮಾಡುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.
ಇನ್ನು ಸಂಸದ ಸಿದ್ದೇಶ್ವರ ಅವರು ಪ್ರತಿಕ್ರಿಯೆ ನೀಡಿದ್ದು, ರೇಣುಕಾಚಾರ್ಯ ನಾಟಕ ಮಾಡುತ್ತಿದ್ದಾನೆ ಅಷ್ಟೇ. ಆತ ನನ್ನ ಮಿತ್ರ. ನಾನು ಅವರ ಜೊತೆ ಮಾತನಾಡುತ್ತೇನೆ, ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದ್ದಾರೆ.