Home ದಾವಣಗೆರೆ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ನಿರಂತರವಾಗಿ ಹೊಸ ಕೌಶಲ್ಯಗಳ ಮೈಗೂಡಿಸಿಕೊಳ್ಳುವಿಕೆ ಅತ್ಯಗತ್ಯ: ದೇಬಬ್ರತ ದಾಸ್ ಪ್ರತಿಪಾದನೆ
ದಾವಣಗೆರೆನವದೆಹಲಿಬೆಂಗಳೂರು

ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ನಿರಂತರವಾಗಿ ಹೊಸ ಕೌಶಲ್ಯಗಳ ಮೈಗೂಡಿಸಿಕೊಳ್ಳುವಿಕೆ ಅತ್ಯಗತ್ಯ: ದೇಬಬ್ರತ ದಾಸ್ ಪ್ರತಿಪಾದನೆ

Share
ವಿದ್ಯಾರ್ಥಿಗಳು
Share

ದಾವಣಗೆರೆ : ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ನಿರಂತರವಾಗಿ ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ ಎಂದು ಭೂಮಿ ಇಂಡಿಯಾ (Bhoomi India) ಸಂಸ್ಥೆಯ ಉಪಾಧ್ಯಕ್ಷ ಮತ್ತು ಕಂಟ್ರಿ ಜನರಲ್ ಮ್ಯಾನೇಜರ್ ದೇಬಬ್ರತ ದಾಸ್ ಪ್ರತಿಪಾದಿಸಿದರು.

ನಗರದ ಜಿಎಂ ವಿಶ್ವವಿದ್ಯಾಲಯದ ಜಿಎಂ ಬಿಸಿನೆಸ್ ಸ್ಕೂಲ್, ‘ಜಿಎಂ ಸೈಂಟಿಫಿಕ್ ಇನ್ನೋವೇಶನ್ ಆಂಡ್ ರಿಸರ್ಚ್ ಎಲ್‌ಎಲ್‌ಪಿ’ (GM Scientific Innovation and Research LLP) ಸಹಯೋಗದೊಂದಿಗೆ ‘ವರ್ತ್‌ಮಾನ್ – 2026’ “ಡಿಜಿಟಲ್ ಯುಗದಲ್ಲಿ ನಿರ್ವಹಣೆಯ ಮರು ಸ್ಥಾಪನೆ: ನಾವೀನ್ಯತೆ ಮತ್ತು ಸುಸ್ಥಿರತೆ” (Redefining Management in Digital Era: Innovation & Sustainability) ಶೀರ್ಷಿಕೆಯಡಿ ಜಿಎಂ ಬ್ಯುಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ‘ವರ್ತ್‌ಮಾನ್ – 2026’ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.

ಎಂಜಿನಿಯರ್‌ಗಳು, ಎಂ‌ಬಿ‌ಎ ಪದವೀಧರರು ಹಾಗೂ ವೈದ್ಯರು ತಮ್ಮ ಕೌಶಲ್ಯಗಳನ್ನು ನಿಯಮಿತವಾಗಿ ಮರು-ಪ್ರಮಾಣೀಕರಿಸಿಕೊಳ್ಳಬೇಕು. ಹಳೆಯ ಜ್ಞಾನಕ್ಕೆ ಪ್ರಸ್ತುತತೆ ಕಡಿಮೆಯಾಗುತ್ತಿದೆ. ಎಐ ಮನುಷ್ಯರ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ, ಆದರೆ ಎಐ ಬಳಸಲು ತಿಳಿದಿರುವ ವ್ಯಕ್ತಿಯು ಎಐ ತಿಳಿಯದಿರುವ ವ್ಯಕ್ತಿಯ ಉದ್ಯೋಗವನ್ನು ಬದಲಾಯಿಸಬಹುದು. ತಂತ್ರಜ್ಞಾನ ಸಂಪೂರ್ಣವಾಗಿ ಪುನರಾರಂಭಗೊಳ್ಳುತ್ತಿರುವ ಈ ಸಮಯದಲ್ಲಿ ಕೇವಲ 30 ವರ್ಷಗಳ ಅನುಭವವಿದೆ ಎಂಬ ಕಾರಣಕ್ಕೆ ಯಾರಿಗೂ ಆದ್ಯತೆ ಸಿಗುವುದಿಲ್ಲ. ಹೊಸ ಕೌಶಲ್ಯಗಳನ್ನು ಕಲಿಯುವುದು ಒಂದೇ ದಾರಿ ಎಂದು ತಿಳಿಸಿದರು.

ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ರಂಗಗಳು ಈಗಾಗಲೇ ಭೌತಿಕ ಶಾಖೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಮುಂಬರುವ 10 ವರ್ಷಗಳಲ್ಲಿ ಉದ್ಯೋಗಾವಕಾಶಗಳಿಗೆ ಕೊರತೆಯಿರುವುದಿಲ್ಲ ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಗಳಾಗಿದ್ದ ಹೈದರಾಬಾದ್‌ನ ನಾಲ್ಸಾರ್ (NALSAR) ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀನಿವಾಸ್ ಸುಬ್ಬರಾವ್ ಪಸುಮರ್ತಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ, ನಾವೀನ್ಯತೆ (Innovation) ಮತ್ತು ಸುಸ್ಥಿರತೆ (Sustainability) ಮ್ಯಾನೇಜ್‌ಮೆಂಟ್ ಕ್ಷೇತ್ರದ ದಿಕ್ಕನ್ನೇ ಬದಲಾಯಿಸುತ್ತಿದ್ದು, ಉದ್ಯೋಗಿಗಳಲ್ಲಿ ಕೌಶಲ್ಯ ನವೀಕರಣ ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ವರದಿಗಳಂತೆ, ತಂತ್ರಜ್ಞಾನದ ವೇಗದ ಬೆಳವಣಿಗೆಯಿಂದಾಗಿ ಹಳೆಯ ಕೋರ್ಸ್‌ಗಳು ಮತ್ತು ಕೌಶಲ್ಯಗಳು ಶೀಘ್ರವಾಗಿ ಪ್ರಸ್ತುತತೆ ಕಳೆದುಕೊಳ್ಳುತ್ತಿವೆ. ಹೀಗಾಗಿ ಎಂಜಿನಿಯರ್‌ಗಳು, ಎಂ‌ಬಿ‌ಎ ಪದವೀಧರರು ಹಾಗೂ ನಿರ್ವಹಣಾಧಿಕಾರಿಗಳು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಜಿಎಂ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಆರ್. ಶಂಖಪಾಲ್ ಅವರು, ಡಿಜಿಟಲ್ ಯುಗದಲ್ಲಿ ಕೇವಲ ಪದವಿ ಪ್ರಮಾಣಪತ್ರಗಳನ್ನು ಪಡೆಯುವುದು ಉದ್ಯೋಗ ಅಥವಾ ಯಶಸ್ಸನ್ನು ಖಾತ್ರಿಪಡಿಸುವುದಿಲ್ಲ; ಬದಲಿಗೆ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಆಲೋಚನೆ, ಹೊಸ ಕೌಶಲ್ಯಗಳು ಹಾಗೂ ಪ್ರಾಯೋಗಿಕ ಸಾಮರ್ಥ್ಯ ಬೆಳವಣಿಗೆ ಅತ್ಯಗತ್ಯ ಎಂದು ಮನವರಿಕೆ ಮಾಡಿದರು.

ವಿದ್ಯಾರ್ಥಿಗಳು ಕೇವಲ ಪೋಷಕರ ಒತ್ತಾಯಕ್ಕಾಗಿಯೋ ಅಥವಾ ನೆಪಮಾತ್ರಕ್ಕಾಗಿಯೋ ಪದವಿ ಪಡೆಯುವ ಮನಸ್ಥಿತಿಯಿಂದ ಹೊರಬರಬೇಕು. ನಾವು ತೊಡಗಿಸುವ ಸಮಯ ಮತ್ತು ಹಣಕ್ಕೆ ತಕ್ಕಂತೆ ಭವಿಷ್ಯದ ವೃತ್ತಿಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ನಾವೇ ಆಲೋಚಿಸಬೇಕು. ಮೊಬೈಲ್‌ಗಳಲ್ಲಿ ವ್ಯಾಖ್ಯಾನಗಳು ಮತ್ತು ವಿಷಯಗಳು ಸುಲಭವಾಗಿ ಸಿಗುವ ಈ ಕಾಲದಲ್ಲಿ ‘ಕೇವಲ ಸಿದ್ಧಾಂತಗಳ ಕಂಠಪಾಠ’ ಶಿಕ್ಷಣವಾಗುವುದಿಲ್ಲ. ಪದವಿ ಎಂಬುದು ಅರ್ಹತೆಗೆ ಕೊಡುವ ಮಾರ್ಗವಷ್ಟೇ ಹೊರತು ಅದು ಉದ್ಯೋಗದ ಗ್ಯಾರಂಟಿ ಅಲ್ಲ. ಪ್ರಾಯೋಗಿಕ ಜ್ಞಾನ ಮತ್ತು ಕೊಡುಗೆ ನೀಡುವ ಸಾಮರ್ಥ್ಯವೇ ಪ್ರಮುಖ ಗ್ಯಾರಂಟಿ ಎಂದು ಹಿತನುಡಿದರು.

ಇಂದಿನ ಕಾಲಘಟ್ಟದಲ್ಲಿ ಸಂಸ್ಥೆಗಳು ಭೌತಿಕ ಸಂಪನ್ಮೂಲಗಳಿಗಿಂತ ವ್ಯಕ್ತಿಯಲ್ಲಿರುವ ಸಾಮರ್ಥ್ಯ ಮತ್ತು ನಾವೀನ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ‘ಹ್ಯೂಮನ್ ರಿಸೋರ್ಸ್’ ಎಂಬುದಕ್ಕಿಂತ ‘ಹ್ಯೂಮನ್ ಪೋಟೆನ್ಶಿಯಲ್’ ಇಂದಿನ ಅಗತ್ಯವಾಗಿದೆ. ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯು ಹಳೆಯ ಮಾದರಿಯ ಉದ್ಯೋಗಗಳನ್ನು ಇಲ್ಲದಾಗಿಸಿದರೂ, ನಾವೀನ್ಯತೆ ಹಾಗೂ ಸೃಜನಶೀಲ ಚಿಂತನೆ ಹೊಂದಿರುವವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಜಿಎಂ ಬಿಸಿನೆಸ್ ಸ್ಕೂಲ್‌ನ ನಿರ್ದೇಶಕರು, ರಾಷ್ಟ್ರೀಯ ಸಮ್ಮೇಳನದ ಸಂಯೋಜಕರಾದ ಡಾ. ಶಿವಕುಮಾರ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಅಗತ್ಯಗಳಿಗೆ ತಕ್ಕಂತೆ ನಿರ್ವಹಣಾ ವಿಧಾನಗಳು (Management Practices) ಹೇಗೆ ಬದಲಾಗಬೇಕು ಎಂಬುದನ್ನು ಚರ್ಚಿಸಲು ಈ ಕಾರ್ಯಕ್ರಮವು ಶೈಕ್ಷಣಿಕ ತಜ್ಞರು, ಉದ್ಯಮ ಕ್ಷೇತ್ರದ ನಾಯಕರು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರಲಿದೆ. ಕೃತಕ ಬುದ್ಧಿಮತ್ತೆ (AI), ಡೇಟಾ ಅನಾಲಿಟಿಕ್ಸ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಈ ಯುಗದಲ್ಲಿ, ತಾಂತ್ರಿಕ ನೈಪುಣ್ಯತೆಯೊಂದಿಗೆ ನೈತಿಕ ಮತ್ತು ಪರಿಸರ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕರ ಅಗತ್ಯವನ್ನು ಈ ಸಮ್ಮೇಳನ ಪ್ರತಿಪಾದಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ CTO ದೇವೇಶ್ ಮಾಥುರ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಶೋಧನೆ ಮತ್ತು ನಾವಿನ್ಯತೆಯ ಅಸೋಸಿಯೇಟ್ ಡೀನ್ ಡಾ. ಸ್ವರೂಪ್ ಕೆ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ನಿರ್ದೇಶಕರಾದ ಡಾ. ಶ್ವೇತಾ ಎಚ್.ಎಸ್, ಜಿ.ಎಂ.ಐ.ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಎಸ್. ಓಂಕಾರಪ್ಪ, ಜಿಎಂ ಬಿಸಿನೆಸ್ ಸ್ಕೂಲ್‌ನ ಡೀನ್, ರಾಷ್ಟ್ರೀಯ ಸಮ್ಮೇಳನದ ಸಂಯೋಜಕರಾದ ಡಾ. ದಮ್ಮಲಪಾಟಿ ರವಿನಾಥ್ ಸೇರಿದಂತೆ ಶೈಕ್ಷಣಿಕ ತಜ್ಞರು, ಉದ್ಯಮ ಕ್ಷೇತ್ರದ ನಾಯಕರು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಸೋಸಿಯೇಟ್ ಪ್ರೊಫೆಸರ್ ಗಳಾದ ಡಾ. ಜಗದೀಶ್ವರಿ ಕೆ ನಿರೂಪಿಸಿದರು. ಡಾ. ಕೀರ್ತಿ ಎಸ್ ವಂದಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles